ಚಾಲನೆ ಇಲ್ಲದ ಕಾರಂಜಿಗಳು 
ಮಂಡ್ಯ

100 ರೂ. ತೆತ್ತರೂ ಇಲ್ಲ ಕಾರಂಜಿ ಸಂಭ್ರಮ

ಲೋಕೇಶ್ ಮನು. ಡಿ
ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಕಾರಂಜಿಗಳು ಚಾಲನೆ ಇಲ್ಲದ ಕಾರಣ ಬೃಂದಾವನಕ್ಕೆ ಬರುವ ಪ್ರವಾಸಿಗರು ನಿರಾಸೆಗೊಂಡು ಕಾವೇರಿ ನೀರಾವರಿ ನಿಗಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೃಂದಾವನ ವೀಕ್ಷಿಸಲು 100 ರೂ. ಕೊಟ್ಟು ಒಳಬಂದರೆ ಯಾವುದೇ ಕಾರಂಜಿಗಳು ಚಾಲನೆ ಇಲ್ಲದೆ ಅವ್ಯವಸ್ಥೆ ಕಂಡ ಪ್ರವಾಸಿರು ಬೇಸರಗೊಂಡಿದ್ದಾರೆ. ಬೃಂದಾವನ ನೋಡಲು ಬಂದ ಕೆಲ ಪ್ರವಾಸಿಗರಂತೂ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಿನ ಅವ್ಯವಸ್ಥೆಯ ವಿಡಿಯೋ ಹಾಕಿ ಸ್ಥಗಿತಗೊಂಡ ಕಾರಂಜಿಗಳ ಅವ್ಯವಸ್ಥೆ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಮೈಸೂರು ಮಹಾರಾಜರು ತಮ್ಮ ಮನೆಯ ಒಡವೆ ಅಡ ಇಟ್ಟು ಕೆ.ಆರ್.ಸಾಗರ ಅಣೆಕಟ್ಟೆ ನಿರ್ಮಿಸಿ, ಅದರ ಮುಂಭಾಗದಲ್ಲಿ ಸುಮಾರು 25 ಎಕರೆ ಜಾಗದಲ್ಲಿ ವಿಶೇಷ ರೀತಿಯಲ್ಲಿ ಮೊಗಲ್ ಶೈಲಿಯಲ್ಲಿ ಹೂ ಗಿಡ, ನೀರಿನ ಕಾರಂಜಿಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ವೀಕ್ಷಿಸಲು ಅನುಕೂಲ ಕಲ್ಪಿಸಿದ್ದರು. ಇದು ಪ್ರಸಿದ್ಧಗೊಂಡು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ವೀಕ್ಷಣೆಗೆ ಬರುತ್ತಾರೆ. ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷೃವೂ ಅಥವಾ ಸರ್ಕಾರದ ಅನುದಾನ ಕೊರತೆಯಿಂದಲೂ ದಕ್ಷಿಣ ಬೃಂದಾವನದಲ್ಲಿ ಎಲ್ಲ ನೀರಿನ ಕಾರಂಜಿಗಳು ನೀರಿಲ್ಲದೆ ಸ್ಥಗಿತಗೊಂಡಿವೆ. ಪ್ರವಾಸಿಗರು ನೀರಿಲ್ಲದ ಕಾರಂಜಿ ತೊಟ್ಟಿ ನೋಡಿಕೊಂಡು ತಾವು ನೀಡಿರುವ ಪ್ರವೇಶ ದರ 100 ರೂ. ಹಿಂದಿರುಗಿಸುವಂತೆ ಕಳೆದ ಐದಾರು ದಿನಗಳಿಂದ ಜಗಳವಾಡುವ ದೃಶ್ಯ ನಿತ್ಯ ಕಂಡು ಬರುತ್ತಿದೆ.