ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದರು.
- ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ
- ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ
ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಾಧನೆಯಲ್ಲ. ಬದಲಿಗೆ ಸುಳ್ಳು ಹೇಳುವ ದಿನಗಳಾಗಿವೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ವ್ಯಂಗ್ಯವಾಡಿದರು.
ಗ್ಯಾರಂಟಿಗೆ ಜನರು ಮತ ಹಾಕಿದ್ದರಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ, ಇವರ ಗ್ಯಾರಂಟಿಗಳ ಬಂಡವಾಳ 11 ತಿಂಗಳಲ್ಲಿಯೇ ಗೊತ್ತಾಯಿತು. ಸಾವಿರ ದಿನಗಳ ಇವರ ಸಾಧನೆೆಗಳನ್ನು ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ. ಚುನಾವಣೆ ವೇಳೆ ಅಷ್ಟೇ ಮಹಿಳೆಯರ ಅಕೌಂಟ್‌ಗೆ ಹಣ ಬಂದಿದೆ. ಮಧ್ಯೆದಲ್ಲಿ ನಾಮ ಹಾಕಿದ್ದಾರೆ. ವಿದ್ಯುತ್ ಬಿಲ್‌ನಲ್ಲಿ ಜನರಿಗೆ ಬರೆ ಎಳೆಯುತ್ತಿದ್ದಾರೆ. ಶಕ್ತಿ ಯೋಜನೆಯಲ್ಲೂ ಬಸ್‌ಗಳೇ ಸರಿಯಾಗಿಲ್ಲ. ಹೊಸ ಬಸ್‌ಗಳನ್ನು ಸರ್ಕಾರ ಖರೀದಿ ಮಾಡುವುದಕ್ಕೆ ಆಗುತ್ತಿಲ್ಲ. ಕೆಟ್ಟಿರುವ ಬಸ್ ದುರಸ್ತಿ ಮಾಡಿಸಲು ಹಣ ಇಲ್ಲ. ಕೆಎಸ್‌ಆರ್‌ಟಿಸಿ ನಿಗಮ ಸ್ವಲ್ಪ ದಿನಗಳಲ್ಲಿ ಮುಳುಗಿ ಹೋಗಲಿದೆ. ಯುವ ನಿಧಿಯಂತೂ ಇದುವರೆಗೆ ಪ್ರಾರಂಭವಾಗಿಲ್ಲ ಎಂದರು.
ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೇಂದ್ರ ಸರ್ಕಾರದ 5+5 ಸೇರಿ 10 ಕೆಜಿ ಅಕ್ಕಿ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ಇವರು ಖರೀದಿ ಮಾಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಅವರು 1000 ದಿನಗಳಲ್ಲೂ ಸುಳ್ಳು ಹೇಳಿದ್ದಾರೆ. 3500 ಕೋಟಿ ರೂ. ಮುಡಾ ಹಗರಣ, 178 ಕೋಟಿ ರೂ. ವಾಲ್ಮೀಕಿ ಹಗರಣ, ವಕ್ಫ್ ಮಂಡಳಿ 4 ಕೋಟಿ ರೂ. ಅಕ್ರಮ ವರ್ಗಾವಣೆ, 11 ಇಲಾಖೆ, 9 ನಿಗಮಗಳಲ್ಲಿ 42.88 ಕೋಟಿ ರೂ. ದುರುಪಯೋಗ, ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಮಧ್ಯವರ್ತಕರಿಂದ ವಸೂಲಿ, ಭೋವಿ ನಿಗಮದಲ್ಲಿ 60 ಕೋಟಿ ರೂ. ಗೋಲ್‌ಮಾಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ಎಸ್ಸಿಪಿ, ಟಿಎಸ್ಪಿ 11 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ, 15,500 ಕೋಟಿ ರೂ. ಸ್ಮಾರ್ಟ್ ಮೀಟರ್ ಹಗರಣ, ಕೋಚಿಮುಲ್ ಹುದ್ದೆ 30 ಲಕ್ಷ ರೂ.ಗೆ ಮಾರಾಟ, ಬಾರ್ ಲೈಸೆನ್ಸ್‌ಗೆ 20 ಲಕ್ಷ ರೂ. ಬೇಡಿಕೆ, ಕಸ ಮೆಷಿನ್‌ಗೆ 617 ಕೋಟಿ ರೂ., ಹೆಸ್ಕಾಂ 90 ಕೋಟಿ ರೂ. ಟ್ರಾನ್ಸ್‌ಫಾರ್ಮರ್ ಹಗರಣ ಸೇರಿದಂತೆ ವಿವಿಧ ಹಗರಣಗಳಲ್ಲೇ ಸರ್ಕಾರ ಮುಳುಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ವಿವೇಕ್, ನಾಗಾನಂದ, ಪ್ರದೀಪ್ ಹಾಜರಿದ್ದರು.
ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡದೆ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಜರಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಎರಡೂವರೆ ವರ್ಷದ ನಂತರ ಅಧಿಕಾರ ಬಿಟ್ಟು ಕೊಡುತ್ತೇನೆ ಎಂದಿದ್ದರು. ಆದರೆ, ಈಗ ದೇವರಾಜ ಅರಸು ಅವರ ದಾಖಲೆ ಮುರಿಯಬೇಕೆಂದು ಹೇಳುತ್ತಿದ್ದಾರೆ. ಮಗನ ಬಾಯಲ್ಲಿ ನಮ್ಮ ತಂದೆ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆಂದು ಮಾತನಾಡಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹೆಗಲಿಗೆ ಹೆಗಲು ಕೊಟ್ಟು ಸರ್ಕಾರ ತಂದಿದ್ದು. ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಸುಳ್ಳು ಹೇಳುವ ಸಿದ್ದರಾಮಯ್ಯ ಅವರು ಜನರಿಗೆ ಸುಳ್ಳು ಹೇಳದೆ ಇರುತ್ತಾರಾ ಎಂಂದು ಕುಟುಕಿದರು.