ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿದರು. 
ಮಂಡ್ಯ

ಚಲುವರಾಯಸ್ವಾಮಿ ಹೇಳಿಕೆಗೆ ಯಾವುದೇ ಮೌಲ್ಯವಿಲ್ಲ: ಮಾಜಿ ಶಾಸಕ ಕೆ.ಸುರೇಶ್‌ಗೌಡ ವಾಗ್ದಾಳಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ವರಿಷ್ಠರನ್ನು ಮೆಚ್ಚಿಸಲು ಇಂತಹ ಮಾತು ಎಷ್ಟು ಸರಿ?
  • ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ
ಮಂಡ್ಯ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಎಚ್.ಡಿ.ದೇವೇಗೌಡರ ಕುಟುಂಬ ಸದಸ್ಯರಿಗೆ ಏಕೆ ಹೊಟ್ಟೆ ಉರಿಯುತ್ತದೆ. ಡಿಕೆಶಿ ಹಾಗೂ ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದಿರುವ ಶಾಸಕ ಎನ್.ಚಲುವರಾಯಸ್ವಾಮಿ ಅವರ ಹೇಳಿಕೆಗೆ ಯಾವುದೇ ಮೌಲ್ಯವಿಲ್ಲ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ವಾಗ್ದಾಳಿ ನಡೆಸಿದರು.
ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತು ಹೊಸ ಮುಖ್ಯಮಂತ್ರಿಯ ಅಧಿಕಾರ ಸ್ವೀಕಾರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಚಾರ. ಆದರೆ, ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಮೌಲ್ಯವಿಲ್ಲದ ಮಾತುಗಳು ಎಷ್ಟು ಸರಿ?. ಚಲುವರಾಯಸ್ವಾಮಿ ಅವರ ಹೇಳಿಕೆಯಿಂದ ತಾಲೂಕಿನ ಮತದಾರರಿಗೆ ಅವಮಾನವಾಗಿದೆ. ಸಾವಿನ ಸೂತಕದ ಬಗ್ಗೆ ಮಾತನಾಡಿರುವ ಚಲುವರಾಯಸ್ವಾಮಿ ಅವರು ಮಾಟ-ಮಂತ್ರ ಮಾಡಿಸಲು ಕೇರಳಕ್ಕೆ ಹೋಗಿರಬಹುದು. ಹಣ-ಅಧಿಕಾರದ ಮದದಿಂದ ಗೌಡರನ್ನು ಟೀಕಿಸುವ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ತಾಲೂಕಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮಂತ್ರಿ ಪದವಿ ಗಿಟ್ಟಿಸಲು ಓಲೈಕೆ ಹೇಳಿಕೆ ನೀಡುವುದನ್ನು ಬಿಟ್ಟು ಜಿಲ್ಲೆಯ ಹಿರಿಯ ನಾಯಕರಂತೆ ಗೌರವಯುತ ಬಾಳ್ವೆ ನಡೆಸಲಿ. ನಾಗಮಂಗಲ ತಾಲೂಕಿನಲ್ಲಿ ನಡೆದಿರುವ ಭೂ ಹಗರಣ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚಿದೆ. ನಾನು ಶಾಸಕನಾಗಿದ್ದ ವೇಳೆಯಲ್ಲೂ ಸದನದಲ್ಲೂ ಪ್ರಶ್ನೆ ಮಾಡಿದ್ದೆ. ಸರ್ಕಾರಕ್ಕೆ ಪತ್ರ ಬರೆದು ತನಿಖೆಗೂ ಒತ್ತಾಯಿಸಿದ್ದೆ. ಇದರ ಹಿಂದೆ ಚಲುವರಾಯಸ್ವಾಮಿ ಅವರ ಬೆಂಬಲಿಗರ ಪಾತ್ರವೇ ಹೆಚ್ಚಿದೆ ಎಂದು ಆರೋಪಿಸಿದರು.
ನಾಗಮಂಗಲ ಮತ್ತು ಮಳವಳ್ಳಿಯಲ್ಲೂ ಭೂ ಹಗರಣಗಳು ನಡೆದಿವೆ. ಜತೆಗೆ ಶ್ರೀರಂಗಪಟ್ಟಣದಲ್ಲೂ ಭೂಹಗರಣ ನಡೆದಿದೆ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ತನಿಖೆಗೆ ಆದೇಶ ನೀಡದೆ ಮೌನವಾಗಿರುವ ಗುಟ್ಟೇನು ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಅವರನ್ನೇ ನಿಂದಿಸುವ ನಿಮಗೆ ನಿಜವಾಗಿಯೂ ಸೂತಕದ ಛಾಯೆ ಆವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಕಂಸಾಪುರ ಇದ್ದರು.