ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು. ಡಾ.ಅಶೋಕ್, ದಿವಾಕರ್, ವೆಂಕಟೇಶ್, ಸುನೀಲ್, ಮಹೇಶ್ ಇತರರು ಇದ್ದರು.
ಕೆ.ಆರ್.ಪೇಟೆ: ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಬಣ್ಣಿಸಿದರು.
ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್ ಬದುಕು ತಿಳಿಸಿಕೊಡುತ್ತದೆ ಎಂದರು.
ಬಾಬು ಜಗಜೀವನರಾಮ್ ಸತತ 3 ದಶಕಗಳ ಕಾಲ ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ, ಅಪಾರ ಆಡಳಿತ ಅನುಭವ ಗಳಿಸಿದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದು. ಆ ನಿಟ್ಟಿಲ್ಲಿ ದೇಶದಲ್ಲಿ ಗರೀಬಿ ಹಠಾವೊ ರೀತಿಯಲ್ಲಿ ಅಸ್ಪಶ್ಯತೆ ಹಠಾವೊ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ತಹಸೀಲ್ದಾರ್ ಡಾ.ಅಶೋಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಇತರರು ಇದ್ದರು.