ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು.
- ಮಹಿಳಾ ಮೀಸಲಾತಿಗೆ ವಿರೋಧ ಏಕೆ?
- ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಕೂಟಗಳ ಬೆಂಬಲ ಇಲ್ಲದೆ ಸೋಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಅಸಲಿ ಮುಖ ದೇಶದ ಜನರ ಎದುರು ಬಯಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಮೀಸಲಾತಿ ಸಿಗಬಾರದು ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಕೇವಲ ತೋರ್ಪಡಿಕೆಗೆ ಮಾತ್ರ ಮಹಿಳೆಯರ ಪರ ಎನ್ನುತ್ತಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದಾದರೂ ಏಕೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಹಿಳಾ ಮೀಸಲಾತಿಗೆ ಬೆಂಬಲ ನೀಡದೆ ಇಂದು ಏನೇನೋ ಕಾರಣ ಕೊಡುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕಾಂಗ್ರೆಸ್‌ನವರು ದೇಶ ಒಡೆಯುವ ಮತ್ತು ಮಹಿಳೆಯರ ವಿರೋಧಿತನವನ್ನು ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ಏಕೆ ಆತುರ ಎನ್ನುತ್ತಿದ್ದಾರೆ. 1971ರ ಜನಗಣತಿ ಆಧಾರದ ಮೇಲೆ 543 ಲೋಕಸಭಾ ಕ್ಷೇತ್ರಗಳಿವೆ. ಆ ಸಂದರ್ಭ 55 ಕೋಟಿ ಜನಸಂಖ್ಯೆ ಇತ್ತು. ಪ್ರಸ್ತುತ 140 ಕೋಟಿ ಜನಸಂಖ್ಯೆ ಇದೆ. ಹಾಗಾಗಿ ಮಹಿಳೆಯರಿಗೆ ಮೀಸಲಾತಿ ನೀಡಿ ಕ್ಷೇತ್ರ ಮರುವಿಂಗಡಣೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾದರು. ಆದರೆ, ಕಾಂಗ್ರೆಸ್‌ನವರು ಬೆಂಬಲ ನೀಡದೆ ಅನುಷ್ಠಾನವಾಗದಂತೆ ಮಾಡಿದರು ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಹಿಂದುಳಿದ ವರ್ಗದವರು. ಹಾಗಾಗಿ ಹಿಂದುಳಿದ ವರ್ಗದವರಿಗೂ ನ್ಯಾಯ ಒದಗಿಸಲು ಮುಂದಾದರು. ದಲಿತ, ರೈತರು, ಹಿಂದುಳಿದವರ ಪರ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರು ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್‌ನವರ ಆರೋಪಗಳೆಲ್ಲವೂ ಆಧಾರರಹಿತವಾಗಿದೆ. 2011ರ ಜನಗಣತಿ ಆಧಾರದ ಮೇಲೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ತೀರ್ಮಾನಿಸಿ ಅದರಂತೆ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದರು. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬೆಂಬಲ ನೀಡಲಿಲ್ಲ. ಒಂದು ದೇಶ ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ, ದೇಶ ಕಟ್ಟುವ ಕೆಲಸ ಮತ್ತು ಕೋವಿಡ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. ಚುನಾವಣೆ ಸಂದರ್ಭ ಬಂದಾಗ ಮಾತ್ರ ಇಂತಹ ಯೋಜನೆಗಳನ್ನು ಜಾರಿಗೆ ತರಲು ಮುಂದಾಗುತ್ತಾರೆ ಎಂಬ ಆರೋಪ ನಿರಾಧಾರ ಎಂದರು.
ಕಾಂಗ್ರೆಸ್ ನಾಯಕರ ಡೋಂಗಿ ರಾಜಕಾರಣ ದೇಶದ ಜನತೆಗೆ ಅರ್ಥವಾಗಿರುವುದರಿಂದಲೇ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಒಂದು ಪ್ರಾದೇಶಿಕ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿಯೂ ಇರಲಾರದು. ಮಹಿಳಾ ಮೀಸಲಾತಿಗೆ ಬೆಂಬಲ ನೀಡದ ಕಾಂಗ್ರೆಸ್ ಪಕ್ಷದ ಮುಖವಾಡವನ್ನು ಇಡೀ ದೇಶದ ಜನತೆಗೆ ತೋರಿಸಬೇಕೆಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಬೇಕಾಯಿತು. ಕಾಂಗ್ರೆಸ್‌ನ ಡೋಂಗಿ ರಾಜಕಾರಣದ ಬಗ್ಗೆ ಇಡೀ ದೇಶದ ಜನತೆಗೆ ತಿಳಿಸಲು ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ, ಜಿಲ್ಲಾಧ್ಯಕ್ಷೆ ಮಂಗಳಾ, ಯುವ ನಾಯಕ ಇಂಡುವಾಳು ಸಚ್ಚಿದಾನಂದ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ರೂಪಾ ಹಾಜರಿದ್ದರು.