ಮಂಡ್ಯದಲ್ಲಿ ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಪರವಾನಗಿ ನೋಂದಣಿ ಕಡ್ಡಾಯ: ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಪ್ರಗತಿ ಪರಿಶೀಲನೆ
  • ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಜಿಲ್ಲೆಯಲ್ಲಿ ಆಹಾರ ಪದಾರ್ಥಗಳ ತಯಾರಿಕೆ, ವಿತರಣೆ, ಶೇಖರಣೆ ಮಾಡುವ ಎಲ್ಲ ಆಹಾರ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟತೆ ಕಾಯ್ದೆಯಡಿಯಲ್ಲಿ ಕಡ್ಡಾಯವಾಗಿ ಪರವಾನಗಿ/ನೋಂದಣಿ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿ, ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವ ಎಲ್ಲ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಸರ್ಕಾರಿ ಅಥವಾ ಖಾಸಗಿ ಉಗ್ರಾಣ, ರಸ್ತೆ ಬದಿ ವ್ಯಾಪಾರಿ, ಮಾಂಸ ಮಾರಾಟಗಾರರು, ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಮಾಡುವವರು ಹಾಗೂ ಕ್ಯಾಂಟಿನ್‌ಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಕಾಯ್ದೆಯಡಿ ಕಡ್ಡಾಯವಾಗಿ ಪರವಾನಗಿ/ನೋಂದಣಿಯನ್ನು ಪಡೆಯಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 1,500 ಅಲೆಮನೆಗಳಿದ್ದು, ಆಹಾರ ಸುರಕ್ಷತಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಆಲೆಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ತಾಪಂ ಇಒ ಹಾಗೂ ಪಿಡಿಒಗಳು ತಮ್ಮ ಕಚೇರಿಯಿಂದ ಆಹಾರ ಉದ್ದಿಮೆ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯು ನ್ಯಾಯಬೆಲೆ ಅಂಗಡಿ ಮತ್ತು ಗೋದಾಮು, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳು ಕಡ್ಡಾಯವಾಗಿ ನೋಂದಣಿ ಕಡ್ಡಾಯಗೊಳಿಸಬೇಕು. ಅಡುಗೆ ಕೋಣೆ, ದಾಸ್ತಾನು ಕೊಠಡಿ, ಅಡುಗೆಯವರು ಮತ್ತು ಸಿಬ್ಬಂದಿಯ ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯ ತಪಾಸಣೆ ಮಾಡಬೇಕು ಎಂದು ಹೇಳಿದರು.
ಅನಧಿಕೃತ ಆಹಾರ ಘಟಕಗಳಿಗೆ ಅಂಕಿತ ಅಧಿಕಾರಿಗಳು ಮತ್ತು ಅವರ ತಂಡ ದಾಳಿ ಹೋದಾಗ ಪೊಲೀಸ್ ಇಲಾಖೆ ಸಹಕಾರ ಪಡೆಯಬೇಕು. ಆಹಾರ ಸುರಕ್ಷತಾಧಿಕಾರಿಗಳು ಪ್ರತಿ ಮಾಹೆ 10 ಕಾನೂನಾತ್ಮಕ ಆಹಾರ ಮಾದರಿ ಹಾಗೂ 15 ಸರ್ವೇ ಸ್ಯಾಂಪಲ್ ಆಹಾರ ಮಾದರಿ ತೆಗೆದು ನೋಂದಾಯಿತ ಆಹಾರ ಪ್ರಯೋಗ ಶಾಲೆಗೆ ಕಳುಹಿಸಲು ತಿಳಿಸಬೇಕು. ಅದರಂತೆ ಧಾನ್ಯಗಳು, ಮಸಾಲ ಪದಾರ್ಥಗಳು, ಅಡುಗೆ ಎಣ್ಣೆ, ಕೊಬ್ಬಿನಾಂಶ ಪದಾರ್ಥ, ಬೇಕರಿ ಉತ್ಪನ್ನ, ಮೊಟ್ಟೆ ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ವಿಶ್ಲೇಷಣೆಗೆ ಕಳುಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಪೌರಾಯುಕ್ತೆ ಪಂಪಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಪ್ರತೀಕ್ ಹೆಗ್ಡೆ ಇತರರಿದ್ದರು.