ದುಷಿ ಮಂಜು ಭೈರವಿ ನೇತೃತ್ವದಲ್ಲಿ 40 ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ
- ಚೆಲುವನಾರಾಯಣಸ್ವಾಮಿ ರಥಸಪ್ತಮಿಯ ರಾಜ್ಯಮಟ್ಟದ ಜಾನಪದ ಕಲಾಮೇಳ
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ರಥಸಪ್ತಮಿಯ ರಾಜ್ಯಮಟ್ಟದ ಜಾನಪದ ಕಲಾಮೇಳದ ಅಂಗವಾಗಿ ಜ.24 ರಂದು ಜಾನಪದ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಜಾನಪದ ಕಲಾವಿದರಿಗೆ ಮತ್ತು ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕ್ಕೊಂಡಿರುವ 27ನೇ ವರ್ಷದ ರಸಸಂಜೆ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದು ಕಲಾವಿದರನ್ನು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸನ್ಮಾನಿಸಲಿದ್ದಾರೆ. ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಹರಧರ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಡಾ.ಶ್ರೀನಾಥ್, ಕುಲಸಚಿವ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ
ಈ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪ್ರತ್ರಕರ್ತ ಕೆ.ಆರ್ ಪೇಟೆ ನೀಲಕಂಠ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸುನಿಲ್ ಕುಮಾರ್ ಚನ್ನಮಾದೇಗೌಡ, ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹೊನ್ನಯ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಲಾವಿದ ಕೃಷ್ಣೇಗೌಡ ಅವರನ್ನು ಅಭಿನಂದಿಸಲಾಗುತ್ತದೆ. ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹುಲಿವಾನ ತಮಟೆ ಕಲಾವಿದ ಭೈರಯ್ಯ, ಕೊತ್ತತ್ತಿ ದೊಣ್ಣೆವರಸೆ ಕಲಾವಿದ ಜೋಗಯ್ಯ, ಲಕ್ಷ್ಮೀಸಾಗರ ಡೊಳ್ಳುಕುಣಿತ ಕಲಾವಿದ ಕುಮಾರ್‌ರನ್ನು ಸನ್ಮಾನಿಸಲಾಗುತ್ತಿದೆ.
ಶನಿವಾರ ಸಂಜೆ 6 ಗಂಟೆಗೆ ಪು.ತಿ.ನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕಲಾವಿದರು, ಗಣ್ಯರನ್ನು ದೇವಾಲಯದ ವೇದಿಕೆಯವರೆಗೆ ಶೋಭಾಯಾತ್ರೆಯಲ್ಲಿ ಕರೆತರಲಾಗುತ್ತದೆ. ಡೊಳ್ಳುಕುಣಿತ, ಮೈಸೂರು ನಗಾರಿ, ಚಂಡೆ, ತಮಟೆಮೇಳ, ನಾಸಿಕ್ ಡೋಲ್, ಕೋಲಾಟ, ವಿದ್ಯಾರ್ಥಿಗಳ ಬ್ಯಾಂಡ್ ಸೇರಿದಂತೆ ಹಲವು ಪ್ರಮುಖ ತಂಡಗಳ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ರಾತ್ರಿ 7.30ಕ್ಕೆ ಬೆಂಗಳೂರಿನ ನಾಟ್ಯ ಭೈರವಿ ಕಲಾಕುಠೀರದ ವಿದುಷಿ ಮಂಜು ಭೈರವಿ ನೇತೃತ್ವದಲ್ಲಿ 40 ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ, ನೀರಾಜನಂ ಮತ್ತು ವಿಶೇಷ ನೃತ್ಯ ರೂಪಕ ಕೃಷ್ಣಲೀಲಾಮೃತ ಪ್ರದರ್ಶನವಿದೆ. ರಾತ್ರಿ 10ಗಂಟೆಗೆ ಕೊತ್ತತ್ತಿ ಪುಟ್ಟಸ್ವಾಮಿ ತಂಡದಿಂದ ಬೆಂಕಿ ಭರಾಟೆ ಕಾರ್ಯಕ್ರಮವಿದೆ. ರಥಸಪ್ತಮಿಗೆ ಸಾಂಪ್ರದಾಯಿಕ ಎಳೆರಂಗೋಲೆ ಹಾಕಲು ಅವಕಾಶವಿದ್ದು, ಮಹಿಳೆಯರು ಹೆಸರು ನೊಂದಾಯಿಸಿ ಸ್ವಯಂಪ್ರೇರಿತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಸಂಘಟಕ ಸೌಮ್ಯಾಸಂತಾನಂ ಮತ್ತು ಕದಲಗೆರೆ ಶಿವಣ್ಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.