ಮಂಡ್ಯದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಶಿವಪ್ರಸಾದ್ ಗೊಲ್ಲಹಳ್ಳಿ ಉದ್ಘಾಟಿಸಿದರು.  
ಮಂಡ್ಯ

ವೈಜ್ಞಾನಿಕ ಸಂದೇಶ ಕೊಡುವ ಜನಪದ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಶಿವಪ್ರಸಾದ್ ಗೊಲ್ಲಹಳ್ಳಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜನಪದ ಈ ನೆಲದ ಅಸ್ಮಿತೆ. ಅಂತೆಯೇ ಶ್ರಮದ ಸಂಕೇತವಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಶಿವಪ್ರಸಾದ್ ಗೊಲ್ಲಹಳ್ಳಿ ಅಭಿಪ್ರಾಯಪಟ್ಟರು.

ನಗರದಲ್ಲಿರುವ ಗಾಂಧಿಭವನದಲ್ಲಿ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮಂಡ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಮದ ಬದುಕು ಜನಪದದಲ್ಲಿ ಅಡಗಿದೆ ಹಾಗೂ ಸಂಗೀತವಿದೆ. ಸಂಸ್ಕಾರ-ಸಾಂಸ್ಕೃತಿಕ ವೈವಿಧ್ಯತೆಯಿದೆ. ಬದುಕು ಹೇಗಿತ್ತು, ಹೇಗಿರಬೇಕು ಎಂದು ತಿಳಿಸಿಕೊಡುವ ವೈಜ್ಞಾನಿಕ ಸಂದೇಶವಿದೆ ಎಂದರು.
ಆಧುನಿಕತೆ ಹಾಗೂ ಬಂಡವಾಳಶಾಹಿ ಪ್ರಭಾವದಿಂದ ಗ್ರಾಮೀಣ ಸೊಗಡಿನ ಕಲೆಗಳು ಮರೆಯಾಗುತ್ತಿದ್ದು, ಇವುಗಳನ್ನು ರಕ್ಷಿಸುವ ತುರ್ತು ಅಗತ್ಯವಿದೆ. ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಆಧುನಿಕ ಬದುಕಿನ ಅಬ್ಬರದಲ್ಲಿ ಗ್ರಾಮೀಣ ಸೊಗಡಿನ ಕಲೆಗಳು ನಶಿಸುತ್ತಿದ್ದು, ಅವುಗಳನ್ನು ದೈನಂದಿನ ಬಳಕೆಗೆ ತರುವ ಮೂಲಕ ಮರುಜೀವ ನೀಡಬೇಕು. ಸಂಕಷ್ಟ ಮೆಟ್ಟಿದ ಕಲೆ ಸದಾ ಜೀವಂತ. ಜನಪದ ಕಲೆಗಳು ಹಲವಾರು ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಎದುರಿಸಿ ಇಂದಿಗೂ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿವೆ. ಪ್ರಸ್ತುತ ಸಾಂಸ್ಕೃತಿಕ ಲೋಕದ ಎಲ್ಲ ಆಯಾಮಗಳು ಸಾಮಾನ್ಯ ಜನರಿಂದ ದೂರವಾಗಿ ಬಂಡವಾಳಶಾಹಿಗಳ ಕೈವಶವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಶೈಕ್ಷಣಿಕ ಚಿಂತನೆಯಲ್ಲಿ ಜನಪದ ಬೆಳೆಯಬೇಕಿದೆ. ಜನಪದ ಕಲೆಗಳನ್ನು ಜೀವಂತವಾಗಿಡಲು ಶಾಲಾ-ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸುವ ಆಲೋಚನೆ ಆಗಬೇಕಿದೆ ಎಂದು ಸಲಹೆ ನೀಡಿದರು.
ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಕಾರ್ಯದರ್ಶಿ ಟಿ.ಡಿ.ನಾಗರಾಜು ಮಾತನಾಡಿದರು. ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ.ಎಂ.ವೆಂಕಟೇಶ್, ಜಾನಪದ ಕಲಾವಿದೆ ಸವಿತಾ, ಗಾಯಕ ಎನ್.ಶೇಖರ್ ಹನಿಯಂಬಾಡಿ, ಪ್ರೊ.ಹುಲ್ಕೆರೆ ಮಹದೇವು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಗಂಗರಾಜ್, ಮಂಜುನಾಥ್ ಇತರರಿದ್ದರು.