ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನಡೆದ ಬೆಳ್ಳಿಹಬ್ಬ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು.
- ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಂ.ಉದಯ್ ಸಲಹೆ
- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಬೆಳ್ಳಿಹಬ್ಬ
ಮದ್ದೂರು: ವಿದ್ಯಾರ್ಥಿಗಳು ಕೇವಲ ಪದವಿಗಷ್ಟೇ ಸೀಮಿತವಾಗದೆ ಹಲವು ವಿಷಯವಾರು ಶಿಕ್ಷಣದತ್ತ ಮುಖ ಮಾಡುವುದರ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ ತಿಳಿಸಿದರು.
ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಐಟಿಐ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಬೆಳ್ಳಿಹಬ್ಬ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐಟಿಐ, ಜಿಟಿಟಿಸಿ, ಡಿಪ್ಲೊಮಾ ಇನ್ನಿತರ ಶಿಕ್ಷಣ ಪಡೆದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಪಾಲಕರು ಮಕ್ಕಳನ್ನು ಕೇವಲ ಪದವಿಗಳಿಗಷ್ಟೇ ಸೀಮಿತಗೊಳಿಸದೆ ಉದ್ಯೋಗ ಸಿಗುವ ಶಿಕ್ಷಣದತ್ತ ಆಸಕ್ತಿ ತೋರಬೇಕು. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆ ಮತ್ತು ಗುರುಗಳ ಋಣ ತೀರಿಸಬೇಕೆಂಬ ಉದ್ದೇಶದಿಂದ ಬೆಳ್ಳಿಹಬ್ಬ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಗುರು ಕಲಿಸಿದ ವಿದ್ಯೆಗೆ ಬೆಲೆ ಕಟ್ಟಲಾಗದು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಕೈಗಾರಿಕೆ ತರಬೇತಿಯಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಜತೆಗೆ ಜಿಟಿಟಿಸಿ, ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮೂಲಕ ಗ್ರಾಮೀಣ ಭಾಗದ ಮಕ್ಕಳು ಉದ್ಯೋಗ ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರಕ್ತದಾನ ಶಿಬಿರದಲ್ಲಿ ನೂರಾರು ಶಿಬಿರಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಕಾಲೇಜು ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮ ಜರುಗಿತು.
ಅಭಿನಂದನೆ: ತೈಲೂರು ವೆಂಕಟಕೃಷ್ಣ(ಸಾಹಿತಿ), ಕೆ.ಜೆ.ಶಿವಲಿಂಗಯ್ಯ(ರಾಷ್ಟ್ರಪ್ರಶಸ್ತಿ ಪುರಸ್ಕೃತ), ಜಿ.ಎಂ.ಸಿದ್ಧರಾಜು(ಸಾವಯವ ಕೃಷಿ), ತೂಬಿನಕೆರೆ ಗೋವಿಂದು (ಗೋಡೆ ಬರಹಗಾರ), ಎಂ.ಎಸ್.ಸಂಜನಾ (ಕ್ರೀಡೆ)ಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.
ಜಿಪಂ ಸಿಇಒ ಕೆ.ಆರ್.ನಂದಿನಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕ ಎನ್.ಎಸ್.ಚಿದಾನಂದ, ಜಂಟಿ ನಿರ್ದೇಶಕಿ ಎಸ್.ಮಂಜುಳಾ, ಕೆ.ಆರ್.ಹಾಲಪ್ಪಶೆಟ್ಟಿ, ಉಪನಿರ್ದೇಶಕ ಕೆ.ಸಿ.ರವಿಶಂಕರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಆರ್.ನಾಗಾನಂದ, ತಾ.ಪಂ. ಇಒ ರಾಮಲಿಂಗಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಪ್ರಾಂಶುಪಾಲ ಪ್ರಕಾಶ್‌ಬಾಬು, ಚನ್ನಂಕೇಗೌಡ, ಗೌರವಾಧ್ಯಕ್ಷ ಡಾ.ಹೊಂಬಯ್ಯ, ಅಧ್ಯಕ್ಷ ಎ.ಎಂ.ಮಹೇಶ್, ಪದಾಧಿಕಾರಿಗಳಾದ ಪ್ರತಾಪ್‌ಚಂದ್ರ, ಸೋಮರಾಜು, ಚಂದ್ರಶೇಖರ್ ಇತರರಿದ್ದರು.