ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟನೆ ಮಾಡಿದರು. ಧನಂಜಯ, ಬಂಗಾರು ನಾಯಕ್, ಪಿ.ಸಂದರ್ಶ, ನಾಗರಾಜು, ಸಿಪಾಯಿ ಶ್ರೀನಿವಾಸ್ ಇದ್ದರು. 
ಮಂಡ್ಯ

ತಾಲೂಕಿಗೆ ಐದು ಕರ್ನಾಟಕ ಪಬ್ಲಿಕ್ ಶಾಲೆ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ. ಉದಯ್ ಮಾಹಿತಿ
ಮದ್ದೂರು: ತಾಲೂಕಿಗೆ ಹೊಸದಾಗಿ 5 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿದ್ದು, ಮದ್ದೂರು ನಗರ ಸೇರಿದಂತೆ ಮಲ್ಲನಕುಪ್ಪೆ, ಕೊಕ್ಕರೆ ಬೆಳ್ಳೂರು, ಕೊಪ್ಪ ಹಾಗೂ ಅಣ್ಣೂರಿನಲ್ಲಿ ಇಷ್ಟರಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.
ಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯ ಮೂಲಕ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅಷ್ಟೇ ಅಲ್ಲದೇ ನಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲೂ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ನೆರವನ್ನು ಹಿಂದಿನಿಂದಲೂ ನೀಡುತ್ತಿದ್ದು, ಅದು ಮುಂದುವರಿಯಲಿದೆ ಎಂದರು.
ಶಿಕ್ಷಣವು ಯಾರೂ ಕದಿಯಲಾರದ ಸಂಪತ್ತು. ಆದರಿಂದ, ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಪಾಲಕರಿಗೆ ಹಾಗೂ ತಾವು ಓದಿದ ಶಾಲೆಗೆ ಕೀರ್ತಿ ತರಬೇಕು ಎಂದರು.
ಬಿಇಒ ಧನಂಜಯ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕಿಗೆ ಮತ್ತೆ 5 ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ, ನೂರಾರು ಶಾಲಾ ಕೊಠಡಿಗಳನ್ನು ದುರಸ್ಥಿ ಹಾಗೂ ನೂತನ ಶಾಲಾ ಕೊಠಡಿಗಳ ನಿರ್ಮಾಣ ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯೆಂದರು.
ನಿವೃತ್ತ ಪ್ರಾಂಶುಪಾಲೆ ಯದುಶೈಲ ಸಂಪತ್ ಮಾತನಾಡಿದರು. ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಂದರ್ಶ, ಪ್ರಾಂಶುಪಾಲ ಬಾಂಗಾರು ನಾಯಕ್, ನಿವೃತ್ತ ಪ್ರಾಂಶುಪಾಲೆ ಯದುಶೈಲ ಸಂಪತ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಾಗರಾಜು, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಮುಖಂಡರಾದ ಪಣ್ಣೆದೊಡ್ಡಿ ವಿಜಯೇಂದ್ರ, ಧನಂಜಯ, ಸುಧಾಕರ್, ಬಾಬು, ಮಂಜು, ಮುರಳಿ, ಶೋಭಾ ಸೇರಿದಂತೆ ಹಲವರು ಹಾಜರಿದ್ದರು.