ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.  
ಮಂಡ್ಯ

ಎಚ್.ಹೊಂಬೇಗೌಡ ಕಾಲೇಜಿಗೆ ಹೊಸ ರೂಪ ಸಿಗಲಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕ್ಷೇತ್ರಗಳ ಐದು ಕಿರುಹೊತ್ತಿಗೆ ಬಿಡುಗಡೆ ಸಮಾರಂಭ
  • ಜನಗಣ ಮುದ್ರಣ ಮತ್ತು ಪ್ರಕಾಶನದ ವತಿಯಿಂದ ಆಯೋಜನೆ
ಮಂಡ್ಯ: ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಚ್.ಹೊಂಬೇಗೌಡ ಕಾನೂನು ಕಾಲೇಜಿಗೆ ಹೊಸ ರೂಪ ಸಿಗಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಕಲಾಮಂದಿರ ಪಕ್ಕದ ಜೆ.ಪಿ.ಸ್ಮಾರಕ ವಿದ್ಯಾಸಂಸ್ಥೆಯ ಎಚ್.ಹೊಂಬೇಗೌಡ ಕಾನೂನು ಕಾಲೇಜು ಆವರಣದಲ್ಲಿ ಜನಗಣ ಮುದ್ರಣ ಮತ್ತು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಐದು ಕಿರುಹೊತ್ತಿಗೆ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹೊಂಬೇಗೌಡ ಕಾನೂನು ಕಾಲೇಜು ಆವರಣ ವಿಶಾಲವಾಗಿದೆ. ಇಲ್ಲಿ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಪ್ರಾರಂಭ ಮಾಡಲು ಸಾಕಷ್ಟು ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದರು.
ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ ಅವರು ಬರೆದಿರುವ ಐದು ಪುಸ್ತಕಗಳು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಅದರಲ್ಲಿನ ವಿಷಯ ಬಹಳ ಮಹತ್ವವಾದುದು. ಸಹಕಾರ ರತ್ನಗಳು, ಮಂಡ್ಯ -ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ. ಆಧುನಿಕ ಬೆಳೆಗಾರರು, ನಾ ಕಂಡಂತೆ ಜಿ.ಮಾದೇಗೌಡ ಹಾಗೂ ಸಹಕಾರ ಸ್ಥಿತಿಗತಿ ಕುರಿತು ಬರೆದಿದ್ದಾರೆ. ಪುಸ್ತಕಗಳಲ್ಲಿ ಗಾತ್ರ ದೊಡ್ಡದಿದ್ದರೆ ಕೆಲವರು ಬೆಚ್ಚಿ ಬೀಳುತ್ತಾರೆ. ಆದರೆ, ಇಲ್ಲಿ ಅಂತಹ ಪ್ರಮೆಯ ಬರುವುದಿಲ್ಲ. ಪ್ರತಿ ಪುಸ್ತಕ ತಿರುವ ಹಾಕಲು ಕನಿಷ್ಟ 20 ರಿಂದ 25 ನಿಮಿಷ ಸಾಕು. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಿ. ಪುಸ್ತಕಗಳು ನಮ್ಮ ಪರಂಪರೆಯನ್ನು ತಿಳಿಸುತ್ತವೆ. ಇದರಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು. ಇಂತಹ ಪುಸ್ತಕಗಳ ಸಂಖ್ಯೆ ಇನ್ನು ಹೆಚ್ಚು ಹೆಚ್ಚಾಗಿ ಬರಲಿ. ಪಾಲಕರು ತಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿ. ಇದರಿಂದ ನಮ್ಮ ಪರಂಪರೆ ಸಂಸ್ಕೃತಿ ಉಳಿವು ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೌಡ್ಲೆ ಚನ್ನಪ್ಪ ಅವರು ಸಹಕಾರ, ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಿರು ಹೊತ್ತಿಗೆಯಲ್ಲಿ ರೈತರಿಗೆ ಸ್ಪೂರ್ತಿಯಾಗುವ ವಿಚಾರಗಳಿವೆ. ಅದನ್ನು ಅನುಸರಿಸಬೇಕು. ರಾಜರ ಕಾಲದ ಜೆ.ಪಿ ಸ್ಮಾರಕ ಸಂಸ್ಥೆ ಈಗ ತನ್ನ ಸೇವೆ ನಿಲ್ಲಿಸಿದೆ. ಇದನ್ನು ಅಭೂತಪೂರ್ವವಾಗಿ ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೆ ನೀಡಬೇಕಿದೆ. ಅದಕ್ಕಾಗಿ ಸ್ವಾಮೀಜಿಗಳೊಂದಿಗೆ ಚರ್ಚಿಸಿ ಮುಂದೇನಾಗಬೇಕೆಂಬುದನ್ನು ನನಗೆ ತಿಳಿಸಿದರೆ ಅಗತ್ಯ ನೆರವು ನೀಡಲು ಬದ್ಧನಾಗಿದ್ದೇನೆಂದು ಭರವಸೆ ನೀಡಿದರು.
ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ ಮಾತನಾಡಿ, ಸಹಕಾರಿ ಕ್ಷೇತ್ರ ತುಂಬ ಮಹತ್ವವಾದ ಕ್ಷೇತ್ರ. ವ್ಯವಸಾಯಕ್ಕೆ ಸಂಪೂರ್ಣ ಸಹಕಾರ ಕೊಡುತ್ತಿತ್ತು. ಹಿಂದೆ ಇದ್ದಂತ ಪ್ರಾಮುಖ್ಯತೆ ಈಗಿಲ್ಲವಾಗಿದೆ. ವ್ಯವಸಾಯಕ್ಕೆ ಪೂರಕವಾದ ಈ ಸಹಕಾರ ಸಂಸ್ಥೆಗಳು ನಶಿಸಿ ಹೋದರೆ, ರೈತರ ಬದುಕು ಅಯೋಮಯವಾಗುತ್ತದೆ. ಶೇ.30ರಷ್ಟು ಭಾಗ ಸಹಕಾರ ಸಂಸ್ಥೆಗಳು ಹಾಳಾಗಿವೆ. ಪ್ರಸ್ತುತ ಸಹಕಾರಿ ಸಂಸ್ಥೆಗಳ ಸ್ಥಿತಿ ಗತಿ ಅಧೋಗತಿಗೆ ದೂಡಲ್ಪಟ್ಟಿವೆ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮಿಮ್ಸ್ ನಿವೃತ್ತ ಪಿಆರ್‌ಒ ಉಮೇಶ್, ಯಮದೂರು ಸಿದ್ದರಾಜು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಹಿರಿಯ ಪತ್ರಕರ್ತ ಬಸವೇಗೌಡ ಇತರರಿದ್ದರು. ಇದೇ ಸಂದರ್ಭದಲ್ಲಿ ಹಲವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಅಂತೆಯೇ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.