ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದ ಬಳಿ 3 ಲಕ್ಷ ಮೀನಿನ ಮರಿಗಳನ್ನು ಶಿಂಷಾ ನದಿ ನೀರಿಗೆ ಬಿಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಓ.ಗಿರೀಶ್, ಬಾಬಾಸಾಬ್, ಮಂಜೇಶ್ವರ್, ಮಂಜುನಾಥ್ ಇತರರು ಇದ್ದರು. 
ಮಂಡ್ಯ

ಮೀನುಗಾರರು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • Fishermen
ಹಲಗೂರು: ಮೀನುಗಾರರು ಕಡ್ಡಾಯವಾಗಿ ಇಲಾಖೆ ವತಿಯಿಂದ ಪರವಾನಗಿ ಮಾಡಿಸಿಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಒ.ಗಿರೀಶ್ ಸಲಹೆ ನೀಡಿದರು.
ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದ ಬಳಿ 3 ಲಕ್ಷ ಮೀನಿನ ಮರಿಗಳನ್ನು ಶಿಂಷಾ ನದಿ ನೀರಿಗೆ ಬಿಡುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಮೀನುಗಾರರು 1 ಸಾವಿರ ರೂ. ಪಾವತಿಸಿ ಪರವಾನಗಿ ಪಡೆದುಕೊಂಡರೆ ಮೀನು ಹಿಡಿಯುವಾಗ ಏನಾದರೂ ಅವಘಡ ಸಂಭವಿಸಿದರೆ ಇಲಾಖೆ ವತಿಯಿಂದ 10 ಲಕ್ಷ ರೂ. ವರೆಗೂ ಪರಿಹಾರ ಧನ ಸಿಗಲಿದೆ. ಅಂಗವೈಕಲ್ಯ ಉಂಟಾದರೆ 3 ಲಕ್ಷ ರೂ.ವರೆಗೂ ಪರಿಹಾರ ದೊರಕಲಿದೆ. ಇಲಾಖೆ ವತಿಯಿಂದ ಮೀನುಗಾರಿಕೆಗೆ ಅವಶ್ಯವಿರುವ ಬೋಟು, ಬಲೆಗಳು, ಮೀನು ಸಾಗಣೆ ಮಾಡಲು ಸ್ಕೂಟರ್ ಮತ್ತು ಸರಕು ಸಾಗಣೆ ವಾಹನಗಳನ್ನು ಪಡೆಯಲು ಅವಕಾಶವಿದೆ. ಆದ್ದರಿಂದ ಎಲ್ಲ ಮೀನುಗಾರರು ಕಡ್ಡಾಯವಾಗಿ ಪರವಾನಗಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್ವರ್ ಮಾತನಾಡಿ, ಬುಯ್ಯನದೊಡ್ಡಿ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿವೆ. ಗ್ರಾಮೀಣ ಬಡ ಜನರ ಜೀವನೋಪಾಯದ ಹಿತದೃಷ್ಟಿಯಿಂದ ಮೀನುಗಾರಿಕೆ ಇಲಾಖೆಯಿಂದ 3 ಲಕ್ಷ ಸಾಮಾನ್ಯ ಗೆಂಡೆಮೀನು ಮರಿಗಳನ್ನು ಶಿಂಷಾ ನದಿಗೆ ಬಿಡಲಾಗುತ್ತಿದೆ. ಮುಂದಿನ 8-10 ತಿಂಗಳ ನಂತರ ಮೀನಿನ ಮರಿಗಳು ಕಟಾವಿಗೆ ಬರಲಿದ್ದು, ಇದರಿಂದ ಈ ಭಾಗದ ಎಲ್ಲ ಮೀನುಗಾರರಿಗೂ ಸಹಯಕಾರಿಯಾಗಲಿದೆ ಎಂದರು.
ಮೀನುಗಾರಿಕೆ ಉಪ ನಿರ್ದೇಶಕರಾದ ಬಾಬಾಸಾಬ್, ಮಂಜೇಶ್ವರ್, ಮಂಜುನಾಥ್, ಮಹದೇವು, ಸಹಾಯಕ ನಿರ್ದೇಶಕಿ ಕೆ.ಜೆ.ಪೂಜಾಶ್ರೀ, ಸಿಬ್ಬಂದಿ ಶಿವಕುಮಾರ್, ಮೀನು ಬೆಳೆಗಾರರ ಮುಖಂಡರಾದ ಶಿವಕುಮಾರ್, ಶ್ರೀನಿವಾಸ್, ಮರಿಸ್ವಾಮಿ, ಕರಿಯಪ್ಪ ಇದ್ದರು.