ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಭೋದಯ ಗೆಳೆಯರ ಬಳಗದಿಂದ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಭೋದಯ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಅಪ್ಪು ಕಪ್ ಅನ್ನು ಬಿ.ಟಿ.ಶ್ರೀಧರ್-ನಾಗೇಶ್ ತಂಡ ತಮ್ಮದಾಗಿಸಿಕೊಂಡಿದೆ. ನವೀನ್-ಬಾಬು ತಂಡ ದ್ವಿತೀಯ, ಅರೋಕ್ಯ- ಕುಮಾರ್ ತಂಡ ತೃತೀಯ, ಮಂಜುನಾಥ್-ಅಭಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಸುನಿಲ್-ಡಾ.ವಿಜಯ್, ಶಂಕರ್-ಶಿವರಾಜ್ ಹಾಗೂ ಪ್ರಮೋದ್-ದೀಪು ತಂಡಗಳು ಸಮಾಧಾನಕರ ಬಹುಮಾನ ಪಡೆದುಕೊಂಡವು.
ಮಾ.1ರಿಂದ ಮಾರ್ಚ್ 17ರವರೆಗೆ ಲೀಗ್ ಪಂದ್ಯಾವಳಿಗಳು ನಡೆಯಿತು. ಪ್ರತಿದಿನ ಎರಡು ಪಂದ್ಯಗಳು ನಡೆದು, ಅಂತಿಮವಾಗಿ ಫೈನಲ್ ಪಂದ್ಯ ಮಾ.17ರಂದು ನಡೆಯಿತು. ಅಂತಿಮವಾಗಿ ಬಿ.ಟಿ.ಶ್ರೀಧರ್ ಹಾಗೂ ನಾಗೇಶ್ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು.
ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಮಾತನಾಡಿ, ಪ್ರತಿದಿನ ಎರಡು ಗಂಟೆ ವ್ಯಾಯಾಮ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ನಿತ್ಯ ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸುಧಾರಣೆಗಾಗಿ ಹೆಚ್ಚಿನ ಆದ್ಯತೆ ವಹಿಸಬೇಕು. ಜತೆಗೆ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಅಪ್ಪು ಜನ್ಮದಿನದ ಪ್ರಯುಕ್ತ ಬಹಳ ಸಂತೋಷದಿಂದಲೇ ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಮಾತನಾಡಿ, ಕ್ರೀಡಾಪಟುಗಳು ಯಾವುದೇ ಕ್ಲೇಶ, ದ್ವೇಷಾಸೂಯೆ ಇಲ್ಲದೆ, ಒಂದಿಷ್ಟು ಲೋಪವಿಲ್ಲದೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಮೆಚ್ಚುಗೆ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಬಹುಮಾನ ಪ್ರಾಯೋಜಕರಾದ ಗುತ್ತಿಗೆದಾರ ಮಾದೇವಸ್ವಾಮಿ, ಹೊನ್ನೇಗೌಡ, ಯುವ ಮುಖಂಡ ಹಿರೇಮರಳಿ ಶಿವಕುಮಾರ್, ಪೇಟೆ ಬೀದಿ ಪ್ರಕಾಶ್ (ಕಾಶಿ) ಇತರರಿದ್ದರು.