ಮಕರ ಸಂಕ್ರಾಂತಿ ನಿಮಿತ್ತ ಚೆಲುವನಾರಾಯಣನಿಗೆ ಅರ್ಪಿಸಲು ಕ್ಷೇತ್ರದೇವತೆ ಬದರೀನಾರಾಯಣಸ್ವಾಮಿ ದೇವಾಲಯದಲ್ಲಿ ಇಟ್ಟಿದ್ದ ಲಪುಷ್ಪಗಳ ತಟ್ಟೆಯ ಭವ್ಯನೋಟ.
ಚತುರ್ವೀದಿಗಳಲ್ಲಿ ವೈಭವದಿಂದ ನಡೆದ ಮಕರ ಸಂಕ್ರಾಂತಿ ಮೆರವಣಿಗೆ
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಯ ಸನ್ನಿಯಲ್ಲಿ ವಿಶ್ವಾವಸು ಸಂವತ್ಸರದ ಉತ್ತರಾಯಣಪುಣ್ಯಕಾಲದ ಪ್ರಥಮ ಉತ್ಸವ ಮಕರಸಂಕ್ರಾಂತಿ ಉತ್ಸವ ಗುರುವಾರ ಸಡಗರ ಸಂಭ್ರಮದಿಂದ ನೆರವೇರಿತು.
ಯತಿರಾಜದಾಸರ್ ಗುರುಪೀಠದಿಂದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಮಕರ ಸಂಕ್ರಾಂತಿ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಗೋಧೂಳಿ ಸಮಯದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಪುಷ್ಪಗಳಿಂದ ತಯಾರಿಸಿದ ಮಾಲೆ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನಿವೇದನ ಮಾಡಿ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದೊಂದಿಗೆ ಆರಂಭವಾದ ಮಕರಸಂಕ್ರಾಂತಿ ಉತ್ಸವ ಚತುರ್ವೀದಿಗಳಲ್ಲಿ ವೈಭವದಿಂದ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಗೋವಿಂದ, ಗೋವಿಂದ ಘೋಷ ಮೊಳಗಿಸುತ್ತಾ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಪುನೀತರಾದರು. ನಂತರ ಕೊಠಾರ ಮಂಟಪದಲ್ಲಿ ಯತಿರಾಜದಾಸರ್ ಗುರುಪೀಠದಿಂದ ವಿಶೇಷಪೂಜೆ ನಡೆದ ನಂತರ ಜೋಯಿಸರು ಈ ವರ್ಷದ ಸಂಕ್ರಾಂತಿ ಲ ಪಠಣ ನೆರವೇರಿಸಿದರು. ರಾತ್ರಿ ಮೂಲಮೂರ್ತಿ ಶ್ರೀಚೆಲುವ ತಿರುನಾರಾಯಣಸ್ವಾಮಿಯನ್ನು ವಿಶೇಷ ಪುಷ್ಪಾಹಾರಗಳಿಂದ ಅಲಂಕರಿಸಿ ಅರೆಯರ್ ಪಾಡಲ್ ನೊಂದಿಗೆ ಅತ್ಯಂತ ಮಹತ್ವವಾದ ವಸಂತರಾಗ ಸೇವೆ ನೆರವೇರಿಸಲಾಯಿತು.
ಉತ್ಸವಕ್ಕೂ ಮುನ್ನ ಕ್ಷೇತ್ರದೇವತೆ ಶ್ರೀಬದರೀ ನಾರಾಯಣಸ್ವಾಮಿ ಸನ್ನಿಯಲ್ಲಿ ಲಪುಷ್ಪದ ತಟ್ಟೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ನಂತರ ಉತ್ಸವದ ವೇಳೆ ಚೆಲುವನಾರಾಯಣನಿಗೆ ಸಮರ್ಪಿಸಲಾಯಿತು.