ಮಣಿಗೆರೆ ಬಳಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಸದ ರಾಶಿಗೆ ಬೆಂಕಿ ಬಿದ್ದಿರುವುದು. 
ಮಂಡ್ಯ

ಮಣಿಗೆರೆ ಬಳಿಯ ಘನ ತ್ಯಾಜ್ಯಕ್ಕೆ ಬೆಂಕಿ

ಪ್ರಮುಖ ಮುಖ್ಯಾಂಶಗಳು

  • ಆವರಿಸಿದ ದಟ್ಟ ಹೊಗೆ
  • ವಾತಾವರಣ ಕಲುಷಿತ
ಕೆ.ಎಂ.ದೊಡ್ಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮಣಿಗೆರೆ ಬಳಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಸದ ರಾಶಿ ಬೆಂಕಿಯಿಂದ ಹೊತ್ತಿ ಉರಿದ ಪರಿಣಾಮ ದಟ್ಟ ಹೊಗೆ ಆವರಿಸಿತ್ತು.
28 ಗುಂಟೆ ಜಾಗದಲ್ಲಿ ಸ್ವಚ್ಛ ಸಂರ್ಕೀಣ ಘಟಕ ನಿರ್ಮಾಣ ಮಾಡಿ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿತ್ತು. ಘಟಕದ ಸುತ್ತ ಸರಿಯಾದ ಕಾಂಪೌಂಡ್ ಹಾಗೂ ಭದ್ರತೆ ಇಲ್ಲದಿರುವುದರಿಂದ ಸೋಮವಾರ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ಇದ್ದು, ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಇದು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪ್ಲಾಸ್ಟಿಕ್, ಗಾಜು ಮತ್ತು ರಾಸಾಯನಿಕ ತ್ಯಾಜ್ಯಗಳು ಒಂದೇ ಕಡೆ ಇದ್ದುದ್ದರಿಂದ ಬೆಂಕಿ ವೇಗ ಹೆಚ್ಚಾಗಿ ದಟ್ಟವಾದ ಹೊಗೆಯಿಂದಾಗಿ ವಾತಾವರಣವನ್ನೇ ಕಲುಷಿತ ಗೊಳಿಸಿದ್ದು, ಪಕ್ಕದ ನೀಲಗಿರಿ ತೋಪಿಗೂ ಬೆಂಕಿ ವ್ಯಾಪಿಸಿದೆ. ಮಾಹಿತಿ ಪಡೆದು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಳೆದ ವರ್ಷ ಭಾರತೀನಗರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಜತೆಗೆ 5 ಲಕ್ಷ ರೂ.ಗೌರವಧನ ನೀಡಲಾಗಿತ್ತು. ಆ ವೇಳೆ ಸಾಮಾನ್ಯ ಸಭೆಯಲ್ಲಿ 5 ಲಕ್ಷ ರೂ.ವನ್ನು ಸ್ವಚ್ಛ ಸಂರ್ಕೀಣ ಘಟಕಕ್ಕೆ ಕೌಂಪೌಂಡ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಹೆಸರಿಗಷ್ಟೇ ಸ್ವಚ್ಛ ಸಂಕೀರ್ಣವಾಗಿದ್ದು ಆ ಘಟಕಕ್ಕೆ ನಿರ್ಮಾಣ ಮಾಡಿದ ನಂತರ ಹಸಿ ಕಸ ಒಣ ಕಸ ಬೇರ್ಪಡಿಸಿ ಯಾವುದೇ ಕೆಲಸ ಮಾಡದೇ ಘಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಅಂದಿನಿಂದ ಇಂದಿನವರೆಗೂ ಕೌಂಪೌಂಡ್ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಘಟಕಕ್ಕೆ ಬೆಂಕಿ ಬಿದ್ದಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.