ಹಲಗೂರು ನಲ್ಲಿ ಬೆಂಕಿ ಹೆಚ್ಚು ಹರಡದಂತೆ ತಡೆಯುತ್ತಿರುವ ಅಗ್ನಿಶಾಮಕದ ಸಿಬ್ಬಂದಿ. 
ಮಂಡ್ಯ

ಹಲಗೂರು:ಕಿಡಿಗೇಡಿಗಳಿಂದ ಬೆಂಕಿ

ಎ. ಆರ್. ರಘುರಾಮ
ಹಲಗೂರು:ಪ್ರತ್ಯೇಕ ಎರಡು ಕಡೆಗಳಲ್ಲಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು ಕರಕಲಾದ ಘಟನೆ ಹಲಗೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಹಲಗೂರು ಕೆರೆ ಕೋಡಿ ಅಂಚಿನಲ್ಲಿರುವ ಪಟ್ಟಲದಮ್ಮ ದೇವಸ್ಥಾನದ ಹಿಂಭಾಗದ ಸುಮಾರು ನಾಲ್ಕೈದು ಎಕರೆ ಭೂ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಮರ ಗಿಡಗಳು ಮತ್ತು ಸಮೀಪದ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆಗಳು ಬೆಂಕಿಗೆ ಆಹುತಿಯಾಗಿವೆ. ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ನಿಯಂತ್ರಣ ತಪ್ಪಿ ವ್ಯಾಪಕವಾಗಿ ಹರಡಿದೆ. ನಂತರ ವಾಸು ಬಾರ್ ಹಿಂಭಾಗದ ಭೀಮಾ ನದಿ ಬಫರ್ ಜೋನ್ ಹಾಗೂ ಚೌಕಿ ಮಠದವರೆಗೆ ಹರಡಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.
ಬೆಂಕಿ ಉರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಬರುತ್ತಿದ್ದ ಹೊಗೆ ಅಲ್ಲಿನ ವಾಸ ಇರುವ ಮನೆಗಳಿಗೂ ವ್ಯಾಪಿಸಿತ್ತು.
ಹಲಗೂರು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಅಗ್ನಿ ಅವಘಡಗಳು ಸಂಭವಿಸಿದರೇ ಮಳವಳ್ಳಿ ಪಟ್ಟಣದಿಂದ ಅಗ್ನಿ ಶಾಮಕ ವಾಹನಗಳು ಅವಘಡ ಸ್ಥಳಕ್ಕೆ ಬರುವಷ್ಟರಲ್ಲಿ ಅಪಾರ ಪ್ರಮಾಣದ ಮೌಲ್ಯಯುತ ವಸ್ತುಗಳು ಬೆಂಕಿಗೆ ಅಹುತಿಯಾಗುತ್ತಿವೆ. ಬಸವನಬೆಟ್ಟ, ಮುತ್ತತ್ತಿ ಅರಣ್ಯ ಪ್ರದೇಶ ಗಳಿದ್ದು ಹಲಗೂರಿನಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮದ ವಿನೋದ್ ಮನವಿ ಮಾಡಿದ್ದಾರೆ
ಬೇಸಿಗೆ ಆರಂಭ ಹಂತದಲ್ಲಿದ್ದು, ಒಣಗಿದ ಗಿಡಗಂಟೆಗಳು ಮತ್ತು ತರಗೆಲೆಗಳಿಗೆ ಬೆಂಕಿ ತಗುಲಿದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಈ ರೀತಿಯಾಗಿ ಮಾಹಿತಿ ನೀಡದೇ ಬೆಂಕಿ ಹಚ್ಚುವುದು ಭಾರೀ ನಷ್ಟಕ್ಕೆ ಕಾರಣವಾಗುತ್ತದೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು. ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸಿದ್ದರಾಮಯ್ಯ, ಮೋಹನ್ ಕುಮಾರ್, ಗಗನ್ ಪಾಲ್ಗೊಂಡಿದ್ದರು.