ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಕೆ.ಎಚ್.ಕೃಷ್ಣೇಗೌಡ, ಅಪ್ಪೇಗೌಡ, ವೆಂಕಟೇಶ್, ಹನುಮೇಗೌಡ, ಮಹದೇವು, ಪ್ರೀತಮ್, ತಮ್ಮಣ್ಣ, ಶಂಕರ್, ರವೀಂದ್ರ, ರಾಜು, ಕುಮಾರ್, ಪುಟ್ಟಪ್ಪ, ಶ್ರೀನಿವಾಸ್, ಸುರೇಶ್, ಇದ್ದರು.
- ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ
ಮದ್ದೂರು: ಕ್ಷೇತ್ರದಲ್ಲಿ ಅಂದಾಜು 800 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನದಲ್ಲಿ ಕೆರೆ ಮತ್ತು ನಾಲೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮಳೆಗಾಲ ಶುರುವಾಗುವ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ 5 ಕೋಟಿ ರೂ. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸೋಮನಹಳ್ಳಿ ಕೆರೆಯನ್ನು ಸ್ವಚ್ಛ, ಸೌಂದರ್ಯೀಕರಣ ಮಾಡಲು ಈಗಾಗಲೇ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಒತ್ತುವರಿ ತೆರವು, ಹೊಸ ತೂಬುಗಳ ನಿರ್ಮಾಣ, ಕೆರೆ ಹೂಳು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಇದರ ಜತೆಗೆ 5 ಕೋಟಿ ರೂ. ವೆಚ್ಚದಲ್ಲಿ ವಾಕಿಂಗ್ ಪಾತ್, ವಿದ್ಯುತ್ ದೀಪ, ನಾಲೆ, ರಸ್ತೆ, ಹಾಗೂ ಏರಿ ಅಭಿವೃದ್ಧಿ ಜತೆಗೆ ಕೊಡಿ ನಿರ್ಮಾಣ ಮಾಡಲು ಇಂದು ಚಾಲನೆ ನೀಡಲಾಗಿದೆ ಎಂದರು.
ಕೆ.ಕೋಡಿಹಳ್ಳಿ ಗ್ರಾಮವು ನಗರಸಭಾ ವ್ಯಾಪ್ತಿಗೆ ಸೇರಿರುವುದರಿಂದ ಈಗಾಗಲೇ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ 1800 ಕೋಟಿ ರೂ. ಗೂ ಹೆಚ್ಚಿನ ಅನುದಾನದಲ್ಲಿ ರಸ್ತೆ, ನೀರಾವರಿ, ಕುಡಿಯುವ ನೀರು, ಸಾರಿಗೆ, ಆಸ್ಪತ್ರೆ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ ಹಲವಾರು ಕಾಮಗಾರಿಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ ಎಂದರು.
ನೀರಾವರಿ ಯೋಜನೆಗಳಿಗೆ ಸರ್ಕಾರ ಕೇಳಿದಷ್ಟು ಅನುದಾನ ಕೊಟ್ಟಿದೆ. ಕೆಮ್ಮಣ್ಣು ನಾಲಾ, ವೈದ್ಯನಾಥ, ಬೈರನ್, ಚಾಮನಹಳ್ಳಿ ಹಾಗೂ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳನ್ನು ಅಭಿವೃದ್ಧಿಯನ್ನು ಮಾಡಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಮುಖಂಡರಾದ ಕೆ.ಎಚ್.ಕೃಷ್ಣೇಗೌಡ, ಅಪ್ಪೇಗೌಡ, ವೆಂಕಟೇಶ್, ಹನುಮೇಗೌಡ, ಮಹದೇವು, ಪ್ರೀತಮ್, ತಮ್ಮಣ್ಣ, ಶಂಕರ್, ರವೀಂದ್ರ, ರಾಜು, ಕುಮಾರ್, ಪುಟ್ಟಪ್ಪ, ಶ್ರೀನಿವಾಸ್, ಸುರೇಶ್, ಬೋಮ್ಮಯ್ಯ, ತಿಮ್ಮಪ್ಪ, ಆರ್.ಸಿ.ಮಹೇಶ್, ಎಇಇ ನಾಗರಾಜ್, ಮತ್ತಿತರರು ಇದ್ದರು.