ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಭೂತನಹೊಸೂರು ಗ್ರಾಮದಲ್ಲಿ ನೊಂದ ಕುಟುಂಬಕ್ಕೆ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆರ್ಥಿಕ ನೆರವು ನೀಡಿದರು.
- ಆರ್ಥಿಕ ನೆರವು ನೀಡಿದ ಯುವ ನಾಯಕ
ಮಂಡ್ಯ: ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಭೂತನಹೊಸೂರು ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ಅವಘಡದಿಂದಾಗಿ ಮನೆ ಭಸ್ಮವಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಭೇಟಿ ನೀಡಿದರು. ಅಂತೆಯೇ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗ್ರಾಮದ ರೇವಣ್ಣ ಮತ್ತು ಯಶೋಧಾ ದಂಪತಿಗೆ ಸೇರಿದ ಮನೆ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಸಂಪೂರ್ಣ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಇಂಡುವಾಳು ಸಚ್ಚಿದಾನಂದ ಅವರು ಭೇಟಿ ನೀಡಿದರು. ಜತೆಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರದಲ್ಲಿದ್ದಾಗ ಅತಿವೃಷ್ಠಿ ಅಥವಾ ಅನಾವೃಷ್ಠಿ ಸಂಭವಿಸಿದ ಮನೆಗಳಿಗೆ ಹಾನಿಯಾದಂತಹ ಸಂದರ್ಭದಲ್ಲಿ ಐದು ಲಕ್ಷ ರೂವರೆಗೆ ಪರಿಹಾರ ನೀಡಲಾಗುತ್ತಿತ್ತು. ಇದು ನೊಂದ ಕುಟುಂಬಕ್ಕೆ ನೆರವಾಗುತ್ತಿತ್ತು. ಜತೆಗೆ ಮತ್ತೊಂದು ಸೂರು ಕಟ್ಟಿಕೊಳಲು ಸಹಾಯಕವಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರದಿಂದ ಇಂತಹ ಪ್ರಕರಣದಲ್ಲಿ ಸರಿಯಾದ ಪ್ರಮಾಣದಲ್ಲಿ ನೆರವು ಸಿಗುತ್ತಿಲ್ಲ. ಏನಾದರೂ ಪ್ರಶ್ನೆ ಮಾಡಿದರೆ ಗ್ಯಾರಂಟಿ ಯೋಜನೆಯ ಬಗ್ಗೆ ಹೇಳುತ್ತಾರೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಅಭಿವೃದ್ಧಿಗಿಂತ ಕುರ್ಚಿ ಸಮರದಲ್ಲಿಯೇ ಕಾಲ ಕಳೆದಿದ್ದಾರೆ. ಇನ್ನಾದರೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿ. ಇಲ್ಲದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸೂನಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕಬ್ಬನಹಳ್ಳಿ ರಾಮಚಂದ್ರು, ಬೇಲೂರು ಗ್ರಾಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ಸಂಜೀವ್, ಭೂತನಹೊಸೂರು ಮಂಜು, ವಿಠಲ, ಚಂದ್ರು, ವೇಣು, ಅಭಿ ಇತರರಿದ್ದರು.