ಹಲಗೂರಿನಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ತೆರಳಿದರು.
ಹಲಗೂರು: ಪಟ್ಟಣದಲ್ಲಿ ಮುಸ್ಲಿಮರು ಸಡಗರ, ಸಂಭ್ರಮದಿಂದ ಶನಿವಾರ ರಂಜಾನ್ ಆಚರಣೆ ಮಾಡಿದರು.
ಹಲಗೂರಿನ ಜಾಮಿಯಾ ಮಸೀದಿ, ಕುಬಾ ಮಸೀದಿ ಮತ್ತು ಮದೀನಾ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಹಲಗೂರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ತೆರಳಿ, ಮಳವಳ್ಳಿ ಮತ್ತು ಇಗ್ಗಲೂರು ರಸ್ತೆಯಲ್ಲಿರುವ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಮಕ್ಕಳು ಹೊಸ ಬಟ್ಟೆ ಧರಿಸಿ ಖುಷಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರು ಮತ್ತು ಹಿರಿಯರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಧರ್ಮಗುರು ಇನಾಂ ಉಲ್ ಹುಸೇನ್ ಹಬ್ಬದ ಸಂದೇಶ ಸಾರಿ, ರಂಜಾನ್ ಮಾಸದಲ್ಲಿ ಇಸ್ಲಾಂ ಧರ್ಮದಲ್ಲಿನ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಸೌಹಾರ್ದತೆ ನೆಲಸಲು ಶ್ರಮಿಸಬೇಕು. ಸರ್ವ ಧರ್ಮದವರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಹಲಗೂರು ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ಮತ್ತು ಪಿಎಸ್‌ಐ ಲೋಕೇಶ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಸಿಬ್ಗತ್ ಉಲ್ಲಾ, ಉಪಾಧ್ಯಕ್ಷ ಮುಜಾಹಿದ್ ಪಾಷಾ, ಕಾರ್ಯದರ್ಶಿ ಅಮೀರ್ ಪಾಷಾ, ಖಜಾಂಚಿ ಈಲಾಲುದ್ದೀನ್, ಗ್ರಾಪಂ ಮಾಜಿ ಸದಸ್ಯರಾದ ಜಮೀಲ್ ಪಾಷಾ, ಸದ್ರುಲ್ಲಾ, ಕುಬಾ ಮಸೀದಿ ಅಧ್ಯಕ್ಷ ವಂದ್ರಿ ಬಾಬು ಇದ್ದರು.