Dignitaries laid wreaths at the portrait of the father of horticulture, Dr. M.H. Marigowda, at a ceremony organized in Mangala village, Mandya taluk.
- ಮರೀಗೌಡರಿಗೆ ಮರಣೋತ್ತರ ಭಾರತರತ್ನ ಲಭಿಸಲಿ
- ತೋಟಗಾರಿಕೆ ಅಭಿವೃದ್ಧಿಗೆ ಜೀವನ ಮುಡಿಪಿಟ್ಟ ಅಧಿಕಾರಿ
- ಪ್ರಶಸ್ತಿ ಪ್ರದಾನ ಸಮಾರಂಭ
ಮಂಡ್ಯ: ಭಾರತದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಅವರಿಗೆ ಮರಣೋತ್ತರ ಭಾರತರತ್ನ ಲಭಿಸಬೇಕು ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಟ್ಟರು.
ತಾಲೂಕಿನ ಮಂಗಲ ಗ್ರಾಮ ಸಮೀಪವಿರುವ ರಾಜ್ ತೋಟಗಾರಿಕೆ ವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಸ್ಯ ವಿಜ್ಞಾನಿ ಡಾ.ಎಂ.ಎಚ್.ಮರೀಗೌಡರಿಗೆ ನೋಬೆಲ್ ಪ್ರಶಸ್ತಿಯೇ ಸಿಗಬೇಕಿತ್ತು, ಆದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು 1968ರಲ್ಲಿ ಸೇರಿಸಲಾದ ಅರ್ಥಶಾಸ್ತ್ರಕ್ಕೆ ಮಾತ್ರ ನೀಡಲಾಗುತ್ತಿದೆ. ಇನ್ನಾದರೂ ಇವರಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ನೀಡಿ ಪುರಸ್ಕರಿಸಲಿ ಎಂದು ನುಡಿದರು.
ಕರ್ನಾಟಕದ ಹಲವೆಡೆ ತೋಟಗಾರಿಕೆ ಅಭಿವೃದ್ಧಿಗೆ ತಮ್ಮ ಜೀವನ ಮುಡಿಪಾಗಿಟ್ಟ ದೂರದೃಷ್ಟಿಯ ಅಧಿಕಾರಿಯಾಗಿದ್ದರು. 1951ರಲ್ಲಿ ಮೈಸೂರಿನಲ್ಲಿ ತೋಟಗಾರಿಕೆ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡು. ಲಾಲ್‌ಬಾಗ್ ಸೇರಿದಂತೆ ರಾಜ್ಯಾದ್ಯಂತ ತೋಟಗಾರಿಕೆ ಶಿಕ್ಷಣ, ಸಂಶೋಧನೆ ಮತ್ತು ರೈತರ ಅಭಿವೃದ್ಧಿಗೆ ಮಹತ್ವದ ಕಾರ್ಯಗಳನ್ನು ಕೈಗೊಂಡರು. ಇಂದಿನ ಯುವಜನತೆ ಕೃಷಿ ಮತ್ತು ತೋಟಗಾರಿಗೆ ಕಡೆಗಣಿಸುತ್ತಿದ್ದಾರೆ. ಇಂತಹ ದಿನಗಳಲ್ಲಿ ಗ್ರಾಮೀಣ ಭಾಗದ ಪದವೀಧರ ಟಿ.ಎನ್.ರಕ್ಷಿತ್‌ರಾಜ್ ಸಾವಯವ ಕೃಷಿಕ, ಬಹುಮಿಶ್ರಿತ ತೋಟಗಾರಿಕೆ ಬೆಳೆ ಬೆಳೆದು ಮಾದರಿಯಾಗಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿದರು. ಶಂಕರಗೌಡ ಬಿ.ಇಡಿ ಕಾಲೇಜು ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಅಭಿನಂದನಾ ನುಡಿಗಳನ್ನಾಡಿದರು. ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ, 2ನೇ ಉಪ ಪ್ರಾಂತಪಾಲ ಚಂದ್ರಶೇಖರ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಶಿಕ್ಷಕ ಕೆ.ಆರ್.ಶಶಿಧರ್ ಈಚಗೆರೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಕ್ತದಾನಿ ಎಂ.ಸಿ.ಲಂಕೇಶ್ ಮಂಗಲ, ಪ್ರ.ರಮೇಶ್, ಲೋಕೇಶ್, ಕುಮಾರ್ ಇತರರಿದ್ದರು. ಇದೇ ವೇಳೆ ಸಾವಯವ ಕೃಷಿಕ ರಕ್ಷಿತ್‌ರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.