ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮದ್ದೂರು ನಗರದ ಮಳವಳ್ಳಿ ರಸ್ತೆಯಲ್ಲಿರುವ ವಿಶ್ವ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು. ವಿ.ಸಿ.ಉಮಾಶಂಕರ್, ತಿಪ್ಪೂರು ರಾಜೇಶ್, ಎಂ.ಸಿ.ಲಿಂಗರಾಜು, ಆಲೂರು ಚೆನ್ನಪ್ಪ ಇತರರು ಇದ್ದರು. 
ಮಂಡ್ಯ

ಸಂಕಷ್ಟದಲ್ಲಿ ರೈತ ಸಮುದಾಯ

ಪ್ರಜ್ವಲ್.ಎನ್
ಮದ್ದೂರು: ಅನ್ನದಾತರ ಶ್ರಮಕ್ಕೆ ತಕ್ಕ ಫಲ ದೊರೆಯುವಂತಾಗಬೇಕು. ಮಳೆ, ಬಿಸಿಲು, ಚಳಿ ಎನ್ನದೆ ಬೇಸಾಯ ಮಾಡಿ ವಿಶ್ವಕ್ಕೆ ಅನ್ನ ನೀಡುವ ರೈತ ಸಂಕುಲ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಕಳವಳ ವ್ಯಕ್ತಪಡಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಳವಳ್ಳಿ ರಸ್ತೆಯಲ್ಲಿರುವ ವಿಶ್ವ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿಗೆ ಮಂಗಳವಾರ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
1980ರಲ್ಲಿ ನಡೆದ ನವಲಗುಂದ ಮತ್ತು ನರಗುಂದ ರೈತ ಹೋರಾಟದಲ್ಲಿ ಮಡಿದ ಮೂವರು ಹಾಗೂ 1982ರಲ್ಲಿ ನಡೆದ ಗೆಜ್ಜೆಲಗೆರೆ ರೈತ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ರೈತ ಹುತಾತ್ಮ ಯೋಧರ ಜತೆಗೆ ನಾಡಿನ 164 ಹುತಾತ್ಮ ರೈತರನ್ನು ಸ್ಮರಿಸುವುದು ಪುಣ್ಯದ ಕೆಲಸ ಹಾಗೂ ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರಸ್ತುತ ನಾಡಿನ ಜಲಾಶಯಗಳು ಮಳೆಯ ಅಭಾವದಿಂದ ಭರ್ತಿಯಾಗದೆ ಕುಡಿಯುವ ನೀರು ಹಾಗೂ ಬೇಸಾಯಕ್ಕೆ ತೊಂದರೆ ಆಗಿದೆ. ಈಗಾಗಲೇ ಭತ್ತದ ಒಟ್ಟು ಹಾಕಿ ನಾಟಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಬೆಳೆದಿರುವ ಕಬ್ಬು, ಬಾಳೆ, ತೆಂಗು ಹಾಗೂ ಅಡಿಕೆ ನೀರಿಲ್ಲದೆ ಒಣಗುತ್ತಿವೆ. ಆದ್ದರಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಚಿಂತಿಸಿ ಬರ ಘೋಷಣೆ ಮಾಡುವ ಮೂಲಕ ರೈತರ ಬೆಳೆ ಸಾಲ ಮನ್ನಾ ಮಾಡಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ಕೆಆರ್‌ಎಸ್‌ನಿಂದ ವಿಶ್ವೇಶ್ವರಯ್ಯ ನಾಲೆಗಳಿಗೆ ಹರಿಯುತ್ತಿರುವ ನೀರು ಕೊನೆಯ ಭಾಗಕ್ಕೆ ತಲುಪಿಸಲು ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಯುವ ಘಟಕದ ಅಧ್ಯಕ್ಷ ವಿ.ಪಿ.ವಿಶ್ವಾಸ್, ಉಪಾಧ್ಯಕ್ಷರಾದ ಪಟೇಲ್ ಹರೀಶ್, ಎಂ.ವೀರಪ್ಪ ಆಲೂರು ಚೆನ್ನಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಹಳ್ಳಿ ಕರಿಗೌಡ, ಕಾರ್ಯದರ್ಶಿ ರಮೇಶ, ಮುಖಂಡರಾದ ವಿ.ಪಿ.ವರದರಾಜು, ವಿ.ಎಂ.ಶಿವರಾಜು ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು, ಮಾಜಿ ಯೋಧ ಶ್ರೀನಿವಾಸ್ ಇದ್ದರು.