ಕರಡಕೆರೆ ಗ್ರಾಮದಲ್ಲಿ ಮದ್ದೂರಿನ ಕೃಷಿ ಇಲಾಖೆ, ಭಾರತೀನಗರದ ರೈತ ಸಂಪರ್ಕ ಕೇಂದ್ರ ವತಿಯಿಂದ ಸಿ.ಎ. ಕೆರೆ ಹೋಬಳಿಯ ವ್ಯಾಪ್ತಿಯ 150 ಕೃಷಿಕರಿಗೆ ಇಲಾಖೆ ವತಿಯಿಂದ ಕೃಷಿ ಪರಿಕರಗಳನ್ನು ಶಾಸಕ ಕದಲೂರು ಉದಯ್ ವಿತರಿಸಿದರು. 
ಮಂಡ್ಯ

ರೈತರು ಆಧುನಿಕ ಕೃಷಿ ಬೇಸಾಯ ಪದ್ಧತಿ ಬಳಸಿಕೊಳ್ಳಿ

ಎಂ.ರವಿ

ಶಾಸಕ ಕದಲೂರು ಉದಯ್ ಸಲಹೆ ಪರಿಕರಗಳ ವಿತರಣೆ

ಕೆ.ಎಂ.ದೊಡ್ಡಿ: ರೈತರು ನೀರನ್ನ ಮಿತವಾಗಿ ಬಳಸಿ ಆಧುನಿಕ ಕೃಷಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಿ ಎಂದು ಶಾಸಕ ಕದಲೂರು ಉದಯ್ ಕಿವಿಮಾತು ಹೇಳಿದರು.
ಸಮೀಪದ ಕರಡಕೆರೆ ಗ್ರಾಮದಲ್ಲಿ ಮದ್ದೂರಿನ ಕೃಷಿ ಇಲಾಖೆ, ಭಾರತೀನಗರದ ರೈತ ಸಂಪರ್ಕ ಕೇಂದ್ರ ವತಿಯಿಂದ ಸಿ.ಎ.ಕೆರೆ ಹೋಬಳಿಯ ವ್ಯಾಪ್ತಿಯ 150 ಕೃಷಿಕರಿಗೆ ಇಲಾಖೆ ವತಿಯಿಂದ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ರೈತರು ನೀರನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಮಣ್ಣಿನಲ್ಲಿರುವ ಫಲವತ್ತತೆಯೂ ನಶಿಸುತ್ತಾ ಹೋಗುತ್ತದೆ. ಆ ನಿಟ್ಟಿನಲ್ಲಿ ನೀರನ್ನ ಮಿತವಾಗಿ ಬಳಸಿ ಬೇಸಾಯ ಪದ್ಧತಿಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯನ್ನು ಮುಂದವರಿಸ ಬೇಕು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಡ್ಯಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಹೋರಾಟ ಮಾಡಿ ಕೃಷಿ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿಸಿ ಸಾಕಷ್ಟು ಅನುದಾನವನ್ನು ತಂದು ರೈತರಿಗೆ ಅನುಕೂಲ ಮಾಡಿದ್ದಾರೆ ಎಂದರು.
ಶಾಸಕ ಕದಲೂರು ಉದಯ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನಿನಲ್ಲಿ ಹಲಸಂದೆ ಬೀಜವನ್ನು ಚೆಲ್ಲುವುದರ ಮೂಲಕ ರೈತರಿಗೆ ಪ್ರಾಯೋಗಿಕವಾಗಿ ಬಿತ್ತನೆ ಕಾರ್ಯ ತೋರಿದರು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿಪಂ ಸದಸ್ಯ ಕೆ.ಕುಮಾರರಾಜು, ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರತಿಭಾ, ಕೆ.ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಭವಾನಿ, ಕರುಣಾ, ತಿಮ್ಮೇಶ್, ಮೊಳ್ಳೆ ನಿಂಗೇಗೌಡ, ಮರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.