ಕೆಆರ್‌ಎಸ್‌ನಿಂದ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು. 
ಮಂಡ್ಯ

ಪ್ರಾಧಿಕಾರದ ಆದೇಶದ ವಿರುದ್ಧ ಸಿಡಿದೆದ್ದ ರೈತರು

ಪ್ರಮುಖ ಮುಖ್ಯಾಂಶಗಳು

  • Farmers
ಪಾಂಡವಪುರ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತ ಸಂಘದ ಕಾರ್ಯಕರ್ತರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಧಿಕ್ಕಾರ, ಪ್ರಾಧಿಕಾರದ ಆದೇಶ ಅವೈಜ್ಞಾನಿಕ, ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡಬಾರದು ಎಂದು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಕೆನ್ನಾಳು ವಿಜಯಕುಮಾರ್, ಕೆಆರ್‌ಎಸ್‌ನಲ್ಲಿ ಈಗ 91 ಅಡಿ ನೀರಿದ್ದು, ಒಳಹರಿವು 1,700ಸಾವಿರ ಕ್ಯೂಸೆಕ್ ಹಾಗೂ ಹೊರಹರಿವು 1,500 ಕ್ಯೂಸೆಕ್ ಇದೆ. ಇಂತಹ ಸನ್ನಿವೇಶದಲ್ಲಿ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ಆದೇಶವು ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತಾಳುತ್ತಿದೆ. ನಮಗೆ ಲಭ್ಯವಿರುವ ನೀರು ಜನವಾರುಗಳಿಗೆ ಬೇಕಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ವಾಸ್ತವಿಕವಾಗಿಲ್ಲ. ಮಳೆಯಾಗಿ 110 ಅಡಿ ನೀರು ಕೆಆರ್‌ಎಸ್‌ನಲ್ಲಿ ಸಂಗ್ರಹವಾದರೆ ಮಾತ್ರ ನೀರು ಬಿಡುವ ತೀರ್ಮಾನವನ್ನು ರಾಜ್ಯ ಸರ್ಕಾವು ತೆಗೆದುಕೊಳ್ಳಬೇಕಿದೆ. ರಾಜ್ಯದ ಹಿತಕಾಯುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕೆಆರ್‌ಎಸ್ ಜಲಾಶಯವು 133 ಚದರ ಕಿ.ಮೀ.ವ್ಯಾಪ್ತಿಯಲ್ಲಿದೆ. ಆದರೆ ಈಗಾಗಲೇ 6.5 ಚದರ ಕಿ.ಮೀ.ವ್ಯಾಪ್ತಿಯ ಜಲಾಶಯವನ್ನು ಹಣವುಳ್ಳವರು ಮತ್ತು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ವೈಜ್ಞಾನಿಕ ಸನ್ನಿವೇಶವನ್ನು ಪ್ರಾಧಿಕಾರವು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಕಾರ್ಯದರ್ಶಿ ಡಾಮಡಹಳ್ಳಿ ಅಶೋಕ, ಮುಖಂಡರಾದ ಕೆನ್ನಾಳು ನಾಗರಾಜು, ವೈ.ಪಿ.ರಘು, ರಾಜಶೇಖರ್, ದಸಂಸ ಮುಖಂಡರಾದ ಎಂ.ಸಣ್ಣಮರಿಯಯ್ಯ, ಎಂ.ಎಸ್.ಕೃಷ್ಣ, ಲಾಲ್‌ಬಹದ್ದೂರು ಶಾಸಿ, ಹಾರೋಹಳ್ಳಿ ಸೋಮಶೇಖರ್, ಬಳೆಅತ್ತಿಗುಪ್ಪೆ ವಿಜಯಕುಮಾರ್, ನರಸಿಂಹಮೂರ್ತಿ ಇತರರು ಪ್ರತಿಭಟನೆಯಲ್ಲಿ ಇದ್ದರು.