ನಿಟ್ಟೂರು ಪ್ರೌಢಶಾಲೆ ಆವರಣದಲ್ಲಿ ಗಣ್ಯರು ಸಸಿ ನೆಟ್ಟು ಪರಿಸರ ದಿನ ಆಚರಿಸಿದರು. ಜೋಗಿಗೌಡ, ರಂಗೇಗೌಡ, ರಾಜಣ್ಣ, ಮುಖ್ಯ ಶಿಕ್ಷಕ ಕೆ.ಎಲ್. ದೇವರಾಜು, ತಿಮ್ಮರಾಜು, ಪಿಡಿಒ ನಟೇಶ್, ಅಶೋಕ, ಅರ್ಜುನ್, ಶಿಕ್ಷಕ ಶಿವಲಿಂಗೇಗೌಡ ಇತರರು ಇದ್ದರು. 
ಮಂಡ್ಯ

ಗೊಬ್ಬರ ಬೆಲೆ ಹೆಚ್ಚಳದಿಂದ ರೈತರಿಗೆ ಸಂಕಷ್ಟ

ಹಲಗೂರು: ಮಾರುಕಟ್ಟೆಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರು ಉತ್ಪಾದನೆಗೆ ಹೆಚ್ಚಿನ ವೆಚ್ಚವನ್ನು ಭರಿಸುತ್ತಿದ್ದರೂ ಅವರಿಗೆ ತಕ್ಕ ಆದಾಯ ಸಿಗುತ್ತಿಲ್ಲ. ಗೊಬ್ಬರಗಳ ಬೆಲೆ ಹೆಚ್ಚಳವೂ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಸಾಲುಮರದ ತಿಮ್ಮಕ್ಕ ಈಕೋ ಕ್ಲಬ್ ಹಾಗೂ ಸಮಗ್ರ ಸಾವಯವ ಸಂಸ್ಥೆಯ ಅಧ್ಯಕ್ಷ ಜೋಗಿಗೌಡ ತಿಳಿಸಿದರು.
ಸಮೀಪದ ನಿಟ್ಟೂರು ಪ್ರೌಢಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಂಘಟನೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೋರಾಟಕ್ಕಿಂತ ಸಂವಾದದ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯ ಯಮದೂರು ಸಿದ್ದರಾಜು ಮಾತನಾಡಿ, ಜೋಗಿಗೌಡರು ಕೃಷಿ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಜಾಗೃತಿ ಮೂಡಿಸಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಪರಿಸರ ಉಳಿದರೆ ಮಾತ್ರ ನಮ್ಮ ಬದುಕು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಹೊಲಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
ನೀರಾವರಿ ಇಲಾಖೆಯ ಗೋಪಿನಾಥ್ ಮಾತನಾಡಿ, ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಕೇವಲ ಸಸಿ ನೆಡುವುದರಿಂದ ಸಾಲದು, ಅವುಗಳನ್ನು ಸಂರಕ್ಷಿಸಿ ಬೆಳೆಸುವ ಜವಾಬ್ದಾರಿಯೂ ನಮ್ಮದಾಗಿದೆ. ಮರಗಳು ನಮಗೆ ಅಗತ್ಯವಾದ ಆಮ್ಲಜನಕವನ್ನು ನೀಡುತ್ತವೆ. ಪ್ಲಾಸ್ಟಿಕ್ ಬಳಕೆ ಮತ್ತು ಅಜಾಗರೂಕ ಕಸ ವಿಲೇವಾರಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ರಂಗೇಗೌಡ, ರಾಜಣ್ಣ, ಮುಖ್ಯ ಶಿಕ್ಷಕ ಕೆ.ಎಲ್. ದೇವರಾಜು, ತಿಮ್ಮರಾಜು, ಪಿಡಿಒ ನಟೇಶ್, ಅಶೋಕ, ಅರ್ಜುನ್, ಶಿಕ್ಷಕ ಶಿವಲಿಂಗೇಗೌಡ ಇತರರು ಇದ್ದರು.