ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಪಂ ವ್ಯಾಪ್ತಿಯ ಚೀಕನಹಳ್ಳಿ ಗ್ರಾಮದ ಬಳಿ ಸೆಸ್ಕ್ ಇಲಾಖೆಯಿಂದ ನಿರ್ಮಿಸಲಾಗಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಗುರುವಾರ ಚಾಲನೆ ನೀಡಿದರು. ಅತಿಗಸಬಾನು, ಕಿಶೋರ್, ವಿನೂತಾ ರವಿಕುಮಾರ್, ಅಜಿತ್, ವೈ.ಪಿ.ಮಂಜುನಾಥ್, ಲಿಂಗೇಶ್ ಇತರರಿದ್ದರು. 
ಮಂಡ್ಯ

ರೈತರು ಜಮೀನುಗಳ ಬಳಿ ಸೋಲಾರ್ ಪ್ಲಾಂಟ್ ನಿರ್ಮಿಸಿಕೊಳ್ಳಲಿ

ಪಾಂಡವಪುರ: ತಾಲೂಕಿನ ಹಳೇಬೀಡು ಗ್ರಾಪಂ ವ್ಯಾಪ್ತಿಯ ಚೀನಕಹಳ್ಳಿ ಬಳಿ 5.50. ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿರುವ ವಿದ್ಯುತ್ ವಿತರಣ ಉಪ ಕೇಂದ್ರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತಾಲೂಕಿನ ಹಳೇಬೀಡು, ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಪಾಂಡವಪುರ ಹಾಗೂ ಮಹದೇಶ್ವರಪುರ ಗ್ರಾಮದ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ವಿತರಣೆ ಮಾಡಲಾಗುತ್ತಿತ್ತು. ವಿದ್ಯುತ್ ಲೈನ್ ಉದ್ದವಾದ ಹಿನ್ನೆಲೆಯಲ್ಲಿ ಹೋಲ್ಟೇಜ್ ಸಮಸ್ಯೆಯಾಗಿ ರೈತರಿಗೆ ಸಾಕಷ್ಟು ಅನನುಕೂಲ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚೀಕನಹಳ್ಳಿ ಬಳಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಇಲ್ಲಿಂದಲೇ ವಿದ್ಯುತ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದ ವಿದ್ಯುತ್ ಸಮಸ್ಯೆ ಉಂಟಾಗಲಿದೆ. ಈಗಾಗಲೇ ಹವಾಮಾನ ವೈಪರೀತ್ಯದ ಬಗ್ಗೆ ನಾವು ಖಾಸಗಿ ವಿಧೇಯಕವನ್ನು ಸಹ ಮಂಡಿಸಿದ್ದೇನೆ. ರೈತರು ತಮ್ಮ ಜಮೀನುಗಳ ಬಳಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಈಗಾಗಲೇ ತಾಲೂಕಿನ ಹಲವೆಡೆ ಸೋಲಾರ್ ಪವರ್ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದರಿಂದ ಈ ಭಾಗಕ್ಕೆ ಆಸ್ಪತ್ರೆ ಮಂಜೂರು ಮಾಡಿಸುವುದು ಬಹಳ ಕಷ್ಟದ ವಿಷಯವಾಗಿದೆ. ಕೈಗಾರಿಕೆ ಆರಂಭಿಸುವುದಕ್ಕೆ ಮಾಣಿಕ್ಯನಹಳ್ಳಿ ಗೇಟ್ ಬಳಿ 10 ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲಿ ಕೈಗಾರಿಕೆ ಸ್ಥಾಪನೆಗೆ ಕ್ರಮವಹಿಸಲಾಗುವುದು. ಅಲ್ಲಲ್ಲಿ ಕೋಲ್ಡ್ ಸ್ಟೋರೆಜ್‌ಗಳನ್ನು ತೆರೆಯಲು ಕ್ರಮವಹಿಸಲಾಗುವುದು. ಸುಂಕಾತೊಣ್ಣೂರು ಏತ ನೀರಾವರಿಯಿಂದ ಹಳೇಬೀಡು ಕೆರೆಗೂ ನೀರು ತುಂಬಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಅತಿಗಸಬಾನು, ಕಾರ್ಯಪಾಲಕ ಇಂಜಿನಿಯರ್‌ಗಳಾದ ಕಿಶೋರ್, ಸಂತೋಷ್‌ಕುಮಾರ್, ಇಇ ವಿನೂತಾ, ಎಇಇ ರವಿಕುಮಾರ್, ಅಜಿತ್, ರೈತ ಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಗುತ್ತಿಗೆದಾರ ಲಿಂಗೇಶ್, ಮುಖಂಡರಾದ ಕೆ.ಎಸ್.ದಯಾನಂದ್, ಹಳೇಬೀಡು ತಿಮ್ಮೇಗೌಡ, ಹೊಸಕೋಟೆ ವಿಜಯ್‌ಕುಮಾರ್, ಕೆನ್ನಾಳು ನಾಗರಾಜು ಇತರರು ಇದ್ದರು.