ಕಬ್ಬು ಸರಬರಾಜುದಾರರಿಗೆ ಸರಕಾರ ಪ್ರೋತ್ಸಾಹ ಧನವಾಗಿ 50 ರೂ. ಹಾಗೂ ಕಾರ್ಖಾನೆ ವತಿಯಿಂದ 50 ಸೇರಿ ಒಟ್ಟು ಟನ್ ಕಬ್ಬಿಗೆ 100 ರೂ.ಗಳನ್ನು ಪಾವತಿಸುವಂತೆ ಒತ್ತಾಯಿಸಿ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಷುಗರ್ ಕಾರ್ಖಾನೆ ವಿರುದ್ಧ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಕೆ.ಎಂ.ದೊಡ್ಡಿ: ಕಬ್ಬು ಸರಬರಾಜುದಾರರಿಗೆ ಸರ್ಕಾರ ಪ್ರೋತ್ಸಾಹ ಧನವಾಗಿ 50 ರೂ. ಹಾಗೂ ಕಾರ್ಖಾನೆ ವತಿಯಿಂದ 50 ರೂ. ಸೇರಿ ಟನ್ ಕಬ್ಬಿಗೆ 100 ರೂ.ಗಳನ್ನು ಪಾವತಿಸುವಂತೆ ಒತ್ತಾಯಿಸಿ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಷುಗರ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದರು.
ಭಾರತ್ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಅಪ್ಪಾಜಿ ಮಾತನಾಡಿ, ರಾಜ್ಯದ ಎಲ್ಲ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ 100 ರೂ.ಗಳನ್ನು ಪಾವತಿಸಿವೆ. ಆದರೆ ದಕ್ಷಿಣ ಭಾಗದ ಕಾರ್ಖಾನೆಗಳ ವ್ಯಾಪ್ತಿಯ ರೈತರಿಗೆ ಸರ್ಕಾರದ 50 ರೂ.ಗಳು ತಲುಪಿದೆ. ಕಾರ್ಖಾನೆಯವರು ಕೊಡಬೇಕಾದ 50 ರೂ.ಗಳನ್ನು ತಕ್ಷಣ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಎಲ್ಲ ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿ ಮಾಡಿವೆ. ಕಬ್ಬು ತೂಕ ಮತ್ತು ಇಳುವರಿ ಅಂಶವನ್ನು ತೂಕದ ಯಂತ್ರ ಅಳವಡಿಸಿ ಪಾರದರ್ಶಕವಾಗಿ ರೈತರಿಗೆ ಸ್ಥಳದಲ್ಲೇ ತಿಳಿಸಬೇಕು. ಕಬ್ಬು ಸರಬರಾಜು ಮಾಡುವ ರೈತರಿಗೆ ಮುಖ್ಯವಾಗಿ ಶುದ್ಧ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ, ಜಾನುವಾರುಗಳಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜುಲೈ ಮೊದಲ ವಾರದಲ್ಲೇ ಕಾರ್ಖಾನೆಯನ್ನು ಪ್ರಾರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರವನ್ನು ಪೂರ್ಣವಾಗಿ ರೈತರಿಗೆ ಕೊಡವಂತೆ ಆಗ್ರಹಿಸಿದರು.
ರೈತರಿಗೆ ಕಬ್ಬು ಸರಬರಾಜು ಆದ 15 ದಿನದೊಳಗೆ ಪೂರ್ಣ ಹಣವನ್ನು ಪಾವತಿಸಬೇಕು. ಅವಧಿ ಮೀರಿದರೆ ಬಡ್ಡಿ ಸಮೇತ ಹಣ ಪಾವತಿಸಬೇಕು, ಕಾರ್ಖಾನೆಯ ಆಡಳಿತ ಮಂಡಳಿ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಷುಗರ್ಸ್ ಕಾರ್ಖಾನೆಯ ಕಬ್ಬು ವಿಭಾಗದ ಜನರಲ್ ಮ್ಯಾನೇಜರ್ ಮಹದೇವ ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಚಾಂಷುಗರ್ ವ್ಯಾಪ್ತಿಯ ಕಿಸಾನ್ ಸಂಘದ ಅಧ್ಯಕ್ಷ ಸಿ.ಬಿ. ಜೋಗಿಗೌಡ, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಕೆ. ರಾಜೇಗೌಡ, ಕಾರ್ಯದರ್ಶಿ ಜೆ.ಕೆ. ಬಸವರಾಜು, ಚನ್ನೇಗೌಡ, ಸಿದ್ದರಾಜು, ಚಿಕ್ಕಣ್ಣ ಮತ್ತಿತರಿದ್ದರು.