ಮಂಡ್ಯ ನಗರದ ಎಪಿಎಂಸಿಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಶಾಸಕ ಪಿ.ರವಿಕುಮಾರ್ ಗಣಿಗ ಉದ್ಘಾಟಿಸಿದರು.  
ಮಂಡ್ಯ

ಉತ್ಪನ್ನವನ್ನು ಬ್ರ್ಯಾಂಡ್ ಮಾಡುವತ್ತಾ ಗಮನಹರಿಸಲಿ: ಶಾಸಕ ಪಿ.ರವಿಕುಮಾರ್ ಗಣಿಗ ಕಿವಿಮಾತು

ಪ್ರಮುಖ ಮುಖ್ಯಾಂಶಗಳು

  • ರೈತ ಉತ್ಪನ್ನ ಮಾರಾಟ ಮಳಿಗೆ ಪ್ರಾರಂಭ
  • ಮಂಡ್ಯ ಕಬ್ಬಿನ ಗಾಣದ ರೈತರ ಉತ್ಪಾದಕರ ಕಂಪನಿಯಿಂದ ಆಯೋಜನೆ
ಮಂಡ್ಯ: ಬೆಳೆಗಳನ್ನು ಬ್ರ್ಯಾಂಡ್ ಮಾಡುವತ್ತಾ ರೈತರು ಹೆಚ್ಚಿನ ಗಮನಹರಿಸಬೇಕು. ಆಗ ಮಾತ್ರ ಆರ್ಥಿಕ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಸಲಹೆ ನೀಡಿದರು.
ನಗರದ ಎಪಿಎಂಸಿ ದಾಸ್ತಾನು ಮಳಿಗೆಯಲ್ಲಿ ಮಂಡ್ಯ ಕಬ್ಬಿನ ಗಾಣದ ರೈತರ ಉತ್ಪಾದಕರ ಕಂಪನಿ ಹಾಗೂ ಮಂಡ್ಯ ತಾಲೂಕು ಕಬ್ಬಿನ ಗಾಣದ ಮಾಲೀಕರ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಉತ್ಪನ್ನ ಮಾರಾಟ ಮಳಿಗೆ ಪ್ರಾರಂಭೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಭಾರತದಲ್ಲಿ 144 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆ ಇರುವಾಗ ಮಾರುಕಟ್ಟೆ ಮಾಡಲು ಸಮಸ್ಯೆ ಇಲ್ಲ. ಆದರೆ ಅವರಿಗೆ ಗುಣಮಟ್ಟದ ಹಾಗೂ ಬ್ರ್ಯಾಂಡ್ ಉತ್ಪನ್ನಗಳನ್ನು ಕೊಡುವ ಕೆಲಸ ಮಾಡಬೇಕು. ಸುಮ್ಮನೆ ಹೆಸರಿಟ್ಟು ಉತ್ಪನ್ನ ಮಾರಾಟ ಮಾಡುವುದಕ್ಕೂ, ಬ್ರಾೃಂಡ್ ಮಾಡಿ ಮಾರಾಟ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರೈತ ಉತ್ಪನ್ನಗಳು ದೊಡ್ಡ ಮಾಲ್‌ನಿಂದ ಹಿಡಿದು ಸಣ್ಣಪುಟ್ಟ ಅಂಗಡಿಯಲ್ಲಿಯೂ ಸಿಗುವಂತೆ ಮಾಡಬೇಕು. ಆ ಮಟ್ಟಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಬೇಕು ಎಂದು ಉದಾಹರಣೆ ಸಹಿತ ವಿವರಿಸಿದರು.
ಕಳೆದ ಮೂರು ವರ್ಷದಿಂದಲೂ ಆಲೆಮನೆ ಮಾಲೀಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆಲೆಮನೆ ಮಾಲೀಕರೆಂದರೆ ಅವರು ಕೂಡ ರೈತರೇ ಆಗಿದ್ದಾರೆ. ಇನ್ನೂ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಪಟ್ಟಿ ಮಾಡಿ ಕೊಡಿ ಖಂಡಿತವಾಗಿಯೂ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹಿಂದೆಲ್ಲ ಆಲೆಮನೆಗಳಿಗೆ ಪರಿಸರ ಮಾಲಿನ್ಯದ ಸಮಸ್ಯೆ ಇತ್ತು. ಅದನ್ನು ಸಾಧ್ಯವಾದಷ್ಟು ಬಗೆಹರಿಸಲಾಗಿದೆ. ಈ ಬಗ್ಗೆ ಸದನದಲ್ಲಿಯೂ ಚರ್ಚೆ ಮಾಡಿದ್ದೆ. ಆದ್ದರಿಂದ ನಿಮ್ಮೊಟ್ಟಿಗೆ ನಾವು ಯಾವಾಗಲೂ ಇರುತ್ತೇವೆ ಎಂದರು.
ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಬಿ.ಆರ್.ಶ್ರೀಹರಿ, ಮಂಡ್ಯ ಕಬ್ಬಿನ ಗಾಣ ಸಂಘದ ಅಧ್ಯಕ್ಷ ಸೋಮಶೇಖರ್‌ಗೌಡ, ಮುಖಂಡರಾದ ರಾಜಶೇಖರ್, ಕೃಷ್ಣ, ವೆಂಕಟೇಶ್, ಮರೀಗೌಡ ಇತರರಿದ್ದರು. 
ಇದೇ ವೇಳೆ ಬೆಂಗಳೂರು ಸಕ್ಕರೆ ನಿರ್ದೇಶನಾಲಯದ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಹಾಗೂ ಮೈಸೂರು ಜಿಲ್ಲೆಯ ನಾಗನಹಳ್ಳಿ ಕೃಷಿ ಇಲಾಖೆ ಉಪ ನಿರ್ದೇಶಕಿ ಮಮತಾ ಅವರನ್ನು ಅಭಿನಂದಿಸಲಾಯಿತು.