ಮದ್ದೂರು ನಗರದ ಚನ್ನೇಗೌಡನದೊಡ್ಡಿಯಲ್ಲಿ ಮನ್‌ಮುಲ್‌ನ ಉಪ ಕಚೇರಿಯ ಸಿಬ್ಬಂದಿ ವತಿಯಿಂದ ಮನ್‌ಮುಲ್ ನೂತನ ಅಧ್ಯಕ್ಷ ಹರೀಶ್‌ಬಾಬು ಹಾಗೂ ನಿರ್ದೇಶಕ ಎಸ್.ಪಿ.ಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಡಾ.ಮಂಜೇಶ್‌ಗೌಡ, ಪುಷ್ಪಲತಾ, ಡಾ.ಗೋವರ್ಧನ್, ಹನುಮಂತು, ದೀಪಕ್ ಇದ್ದರು.
- ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹರೀಶ್‌ಬಾಬು ಹೇಳಿಕೆ
- ಚನ್ನೇಗೌಡನದೊಡ್ಡಿಯಲ್ಲಿ ಅಭಿನಂದನಾ ಸಮಾರಂಭ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಹಾಗೂ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಮನ್‌ಮುಲ್ ಅಧ್ಯಕ್ಷ ಹರೀಶ್‌ಬಾಬು ತಿಳಿಸಿದರು.
ನಗರದ ಚನ್ನೇಗೌಡನದೊಡ್ಡಿಯಲ್ಲಿ ಶುಕ್ರವಾರ ಮನ್‌ಮುಲ್‌ನ ಉಪ ಕಚೇರಿಯ ಸಿಬ್ಬಂದಿ ಹಮ್ಮಿಕೊಳ್ಳಲಾಗಿದ್ದ ಮನ್‌ಮುಲ್ ನೂತನ ಅಧ್ಯಕ್ಷ ಹರೀಶ್‌ಬಾಬು ಅವರಿಗೆ ಅಭಿನಂದನೆ ಹಾಗೂ ಫಲಾನುಭವಿ ಹಾಲು ಉತ್ಪಾದಕರಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟ ತಾಲೂಕು ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರ ನಂಬಿಕೆ ಗಳಿಸಿದೆ. ಜತೆಗೆ ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಒಕ್ಕೂಟಕ್ಕೆ ರೈತರು ಗುಣಮಟ್ಟದ ಹಾಲು ಪೂರೈಸುತ್ತಿರುವ ಹಿನ್ನೆಲೆಯಿಂದಲೇ ಮನ್‌ಮುಲ್ ಕೂಡ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತಿದೆ ಎಂದರು.
ಕಳೆದ ವರ್ಷ ಮದ್ದೂರು ತಾಲೂಕಿನಿಂದ ಒಕ್ಕೂಟಕ್ಕೆ ದಿನನಿತ್ಯ 1.40 ಲಕ್ಷ ಲೀಟರ್ ಹಾಲು ಪೂರೈಕೆಯಾಗುತಿತ್ತು. ಪ್ರಸ್ತುತ ವರ್ಷ ಪ್ರತಿನಿತ್ಯ 2.30 ಲಕ್ಷ ಲೀಟರ್ ಹಾಲು ಪೂರೈಕೆಯಾಗುವ ಮೂಲಕ ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ತಾಲೂಕುಗಳ ಪೈಕಿ ತಾಲೂಕು 2ನೇ ಸ್ಥಾನದಲ್ಲಿದ್ದು ತನ್ನದೇ ಹಿರಿಮೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನ್‌ಮುಲ್ ನಿಂದ ತಾಲೂಕು ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಹಕಾರ ಸಂಘಗಳ ಮೂಲಕ ಅಗತ್ಯ ಸೌಕರ್ಯಗಳನ್ನು ಪೂರೈಸಲಾಗುತಿದ್ದು, ಉತ್ಪಾದಕರು ತಮ್ಮ ಯಾವುದೇ ಸಮಸ್ಯೆಗಳಿದ್ದರು ಅಧಿಕಾರಿಗಳು ಸೇರಿದಂತೆ ನನ್ನ ಗಮನಕ್ಕೆ ತರಬಹುದು ಎಂದರು.
ಮನ್‌ಮಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಹೈನುಗಾರಿಕೆ ಜಿಲ್ಲೆಯ ರೈತರ ಪಾಲಿಗೆ ಸಂಜೀವಿನಿಯಾಗಿದೆ. ಹಾಲು ಉತ್ಪಾದಕರ ಹಿತ ಕಾಯುವುದೇ ಒಕ್ಕೂಟ ಧ್ಯೇಯವಾಗಿದೆ ಎಂದರು.
ಉಪ ವ್ಯವಸ್ಥಾಪಕ ಡಾ.ಮಂಜೇಶ್‌ಗೌಡ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕಿ ಪುಷ್ಪಲತಾ, ಪಶು ವೈದ್ಯರಾದ ಡಾ.ಗೋವರ್ಧನ್, ಹನುಮಂತು, ದೀಪಕ್, ವಿಸ್ತರಣಾಧಿಕಾರಿಗಳು ಹಾಗೂ ಉಪ ಕಚೇರಿಯ ಸಿಬ್ಬಂದಿ ಹಾಜರಿದ್ದರು.