ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಮಾತನಾಡಿದರು. 
ಮಂಡ್ಯ

ನಿಷೇಧದ ನಡುವೆಯೂ ಅನಧಿಕೃತ ಗಣಿಗಾರಿಕೆ: ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಆರೋಪ

ಪ್ರಮುಖ ಮುಖ್ಯಾಂಶಗಳು

  • ಟಾಸ್ಕ್ ಫೋರ್ಸ್ ಸಮಿತಿ ವಿಫಲವಾಗಿದೆ ಎಂದು ಆಕ್ರೋಶ
  • ಅಕ್ರಮ ಗಣಿಗಾರಿಕೆ ತಡೆಯಲು ಕ್ರಮವಹಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಮಂಡ್ಯ: ಇತ್ತೀಚೆಗೆ ಜಿಲ್ಲಾಧಿಕಾರಿ ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ನಿಷೇಧ ವಿಧಿಸಿರುವ ಸ್ಥಳದಲ್ಲಿ ಅನಧಿಕೃತವಾಗಿ ಎಗ್ಗಿಲ್ಲದೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಆರೋಪಿಸಿದರು.
ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿನ ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಿಸಲು ಡಿಸಿ ಮಾ.11ರಂದು ನಿಷೇಧಾಜ್ಞೆ ಹೊರಡಿಸಿದ್ದರು. ಆದರೆ ಆದೇಶವನ್ನು ಸಾಕಾರಗೊಳಿಸುವಲ್ಲಿ ಟಾಸ್ಕ್ ಫೋರ್ಸ್ ಸಮಿತಿ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.
ಜಿಲ್ಲಾದ್ಯಂತ 103 ಕೋರೆಗಳಿದ್ದರೆ, ಶ್ರೀರಂಗಪಟ್ಟಣ ತಾಲೂಕಿನಲ್ಲಿಯೇ 52 ಇವೆ. ಅವುಗಳಲ್ಲಿ 22ಕ್ಕೆ ಮಾತ್ರ ಪರವಾನಗಿ ಪಡೆಯಲಾಗಿದೆ. ಉಳಿದೆಡೆ ಸಿ ಫಾರಂ ಪಡೆದಿರುವುದಾಗಿ ಹೇಳಿ ಅರಣ್ಯ ಪ್ರದೇಶದಲ್ಲೆಲ್ಲ ಗಣಿಗಾರಿಕೆ ಮಾಡುತ್ತಿದ್ದಾರೆ. ಇವುಗಳಿಗೆ ಸಿ ಫಾರಂ ನೀಡಿರುವ ಗಣಿ ಇಲಾಖೆಯವರೇ ಹೊಣೆಗಾರರಾಗಿದ್ದಾರೆ. ಅನಧಿಕೃತ ಕೋರೆಗಳಲ್ಲಿ ರಾತ್ರಿ ವೇಳೆಯಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು, ಹೋರಾಟಗಾರರು ದೂರಿದರೆ ಗಣಿ ಇಲಾಖೆಯವರು ಪರಿಶೀಲಿಸುವುದಾಗಿ ತಿಳಿಸಿ ಯಾವುದೇ ಕ್ರಮ ವಹಿಸುವುದಿಲ್ಲ. ಬೆಂಗಳೂರಿನಿಂದ ಸ್ಫೋಟಕಗಳು ಸರಬರಾಜಾಗುತ್ತಿರುವುದು ತಿಳಿದಿದ್ದರೂ ಜಿಲ್ಲೆಯ ಪೊಲೀಸರೇ ಸ್ಪೋಟಕ ಸಾಗಾಣೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.
ಪ್ರತಿನಿತ್ಯ 1000 ಟನ್‌ನಷ್ಟು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ 200 ಕೋಟಿ ರೂ ರಾಜಧನ ನಷ್ಟವಾಗುತ್ತಿದೆ. ನೆಪಮಾತ್ರಕ್ಕೆ ಅಲ್ಲಲ್ಲಿ ವಾಹನಗಳನ್ನು ತಡೆದು 100 ರಿಂದ 200 ರೂ ಪಡೆದು ಬಿಟ್ಟು ಕಳುಹಿಸಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಅರಣ್ಯ, ಪೊಲೀಸ್, ಗಣಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೇ ಇದ್ದಾರೆ. ಆದರೆ ಅವರೇ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ದ ಹಾಗೂ ಅಕ್ರಮ ಗಣಿಗಾರಿಕೆ ತಡೆಯಲು ಕ್ರಮವಹಿಸುವಂತೆ ಆಗ್ರಹಿಸಿದರು.
ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ತೇಜಸ್, ಮಹೇಶ್, ದಸಂಸ ಗಂಜಾಂ ರವಿಚಂದ್ರ ಇದ್ದರು.