ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿ ರೈತ ಸಂಘ, ಎಸ್.ಡಿ.ಎಂ.ಸಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಕಪ್ಪುಬಾವುಟ ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಿದರು.
- ಸರ್ಕಾರಿ ಶಾಲೆಗಳ ವಿಲೀನಕ್ಕೆ ವಿರೋಧ
- ಮಕ್ಕಳಿಗೆ ಸಿಬಿಎಸ್‌ಇ ಶಿಕ್ಷಣ ಒದಗಿಸಲು ಆಗ್ರಹ
- ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ: ರಾಜ್ಯದಲ್ಲಿ 40 ಸಾವಿರ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ರೈತ ಸಂಘ, ಎಸ್.ಡಿ.ಎಂ.ಸಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಕಪ್ಪುಬಾವುಟ ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಒಂದು ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಮತ್ತೊಂದು ಕೈಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹೊರಟರು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದು, ಸಂಜೆ ಬಿಡುಗಡೆ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಮ್ಯಾಗ್ನೆಟ್ ಶಾಲೆ ಮತ್ತು ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಶಾಶ್ವತವಾಗಿ ಬೀಗ ಹಾಕುವ ಹುನ್ನಾರ ನಡೆಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ ಎಲ್‌ಕೆಜಿಯಿಂದ 5ನೇ ತರಗತಿಯವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್‌ಇ ಶಿಕ್ಷಣ ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸಂತೋಷ್‌ಗೌಡ, ಶಿವಳ್ಳಿ ಚಂದ್ರಶೇಖರ್, ಕೀಳಘಟ್ಟ ನಂಜುಂಡಪ್ಪ, ಸೋ.ಶಿ. ಪ್ರಕಾಶ್, ಪ್ರಭುಲಿಂಗ, ಮಹೇಂದ್ರ, ಅನಿಲ್‌ಕುಮಾರ್, ಎಂ.ಬಿ.ನಾಗಣ್ಣಗೌಡ ಇದ್ದರು.