ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮನವಿ ಮಾಡಿದರು. 
ಮಂಡ್ಯ

ಪೌತಿ ಖಾತೆ, ಆರ್‌ಟಿಸಿ ತಿದ್ದುಪಡಿಗೆ ರೈತರ ಅಲೆದಾಟ

ನಾಗೇಶ ಎಸ್
ಕೆ.ಆರ್.ಪೇಟೆ: ಪಾಂಡವಪುರ ಉಪ ವಿಭಾಗಾಧಿಕಾರಿಗಳು ವಾರದಲ್ಲಿ ಒಂದು ದಿನ ನಿಗದಿಪಡಿಸಿಕೊಂಡು ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ರೈತರ ಪೌತಿ ಖಾತೆ ಮತ್ತು ಆರ್.ಟಿ.ಸಿ ತಿದ್ದುಪಡಿ ಮತ್ತಿತರ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮನವಿ ಮಾಡಿದರು.
ಸರ್ಕಾರ ರಾಜ್ಯದಾದ್ಯಂತ ಪೌತಿ ಖಾತೆ ಆಂದೋಲನ ಆರಂಭಿಸಿದ್ದರೂ ಸಹ ತಾಲೂಕಿನಲ್ಲಿ ನಿರೀಕ್ಷಿತ ಗುರಿ ಮುಟ್ಟಿಲ್ಲ. ಪೌತಿ ಖಾತೆ ಮತ್ತು ಆರ್.ಟಿ.ಸಿ ತಿದ್ದುಪಡಿಗೂ ರೈತರು ಲಂಚ ಕೊಡಬೇಕಾಗಿದೆ. ಸರ್ಕಾರ ಲಂಚ ಕೇಳುವ ನೌಕರರ ವಿರುದ್ಧ ದೂರು ನೀಡುವಂತೆ ಹೇಳುತ್ತದೆ. ಆದರೆ ದೂರು ನೀಡಿದರೂ ಯಾವುದೇ ನೌಕರನ ಮೇಲೂ ಕ್ರಮ ಆಗುತ್ತಿಲ್ಲ. ಇದರಿಂದಾಗಿ ದೂರು ನೀಡಿದ ರೈತರು ತಮ್ಮ ಕೆಲಸ ಮಾಡಿಸಿಕೊಳ್ಳಲಾಗದೆ ಪರಿತಪಿಸುವ ಸ್ಥಿತಿಯಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಶೀಳನೆರೆ ಹೋಬಳಿಯಲ್ಲಿ ಪೌತಿ ಖಾತೆ ಮಾಡುವಾಗ ನೈಜ ಕುಟುಂಬದ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡದೆ ಪೌತಿಯಾದ ರೈತ ಕುಟುಂಬಕ್ಕೆ ಸಂಬಂಧವೇ ಇಲ್ಲದ ಮತ್ಯಾರದೋ ಹೆಸರಿಗೆ ಗ್ರಾಮ ಆಡಳಿತಾಧಿಕಾರಿಗಳು ಪೌತಿ ಖಾತೆ ಮಾಡಿದ್ದ ಪ್ರಕರಣವನ್ನು ರಾಜ್ಯ ರೈತಸಂಘ ದಾಖಲೆ ಸಮೇತ ಬೆಳಕಿಗೆ ತಂದಿದೆ. ಆದರೂ ತಪ್ಪಿತಸ್ಥ ನೌಕರರ ಮೇಲೆ ಯಾವುದೇ ಕ್ರಮ ಆಗಿಲ್ಲ. ಪೌತಿ ಖಾತೆ ಮಾಡಿಸಿಕೊಳ್ಳಲು ರೈತ ಕುಟುಂಬಗಳು ಗ್ರಾಮ ಆಡಳಿತಾಧಿಕಾರಿಗಳಿಗೆ ಲಂಚ ಕೊಡಬೇಕಾದ ಪರಿಸ್ಥಿತಿಯಿದೆ. ಲಂಚ ಕೊಡದಿದ್ದರೆ ಪೌತಿ ಖಾತೆ ಮತ್ತು ಆರ್.ಟಿ.ಸಿ ತಿದ್ದುಪಡಿಯಂತಹ ಪ್ರಕರಣಗಳಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡುವ ಗ್ರಾಮ ಆಡಳಿತಾಧಿಕಾರಿಗಳು ತಪ್ಪು ಸರಿಪಡಿಸಿಕೊಳ್ಳಲು ಎ.ಸಿ ಕೋರ್ಟಿಗೆ ಅಪೀಲು ಹಾಕಿಕೊಳ್ಳುವಂತೆ ರೈತರಿಗೆ ಉಚಿತ ಸಲಹೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳು ಮಾಡಿದ ತಪ್ಪಿಗೆ ರೈತರು ವಿನಾಕಾರಣ ಒಬ್ಬ ವಕೀಲರನ್ನು ನೇಮಕ ಮಾಡಿಕೊಂಡು ಉಪ ವಿಭಾಗಾಧಿಕಾರಿಗಳ (ಎ.ಸಿ) ಕೋರ್ಟಿಗೆ ಅಲೆಯಬೇಕಾಗಿದೆ. ಇದರಿಂದ ರೈತರ ಹಣ ಮತ್ತು ಸಮಯಗಳು ಹಾಳಾಗುತ್ತಿವೆ ಎಂದು ದೂರಿದರು.
ಕೆ.ಆರ್.ಪೇಟೆ ತಾಲೂಕಿನ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಕೇಸ್ ವರ್ಕರ್ ಇರುತ್ತಾರೆ. ಪೌತಿ ಖಾತೆ ನಿರಂತರವಾದ ಪ್ರಕ್ರಿಯೆ. ಆರ್.ಟಿ.ಸಿ ಹೊಂದಿದ ರೈತ ನಿಧನ ಹೊಂದಿದರೆ ಆತನ ಹೆಸರಿನಲ್ಲಿರುವ ಆರ್.ಟಿ.ಸಿ ಯನ್ನು ಆತನ ಕುಟುಂಬಸ್ಥರ ಹೆಸರಿಗೆ ಖಾತೆ ಮಾಡಬೇಕು. ಆದಕಾರಣ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಅವರು ವಾರದಲ್ಲಿ ಒಂದು ದಿನ ನಿಗದಿಮಾಡಿಕೊಂಡು ತಮ್ಮ ಕೇಸ್ ವರ್ಕರ್ ಸಮೇತ ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಕಂದಾಯ ಇಲಾಖೆ ಕಚೇರಿಗೆ ಆಗಮಿಸಿ, ರೈತರ ಕೆಲಸ ಮಾಡಿಕೊಟ್ಟರೆ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಸರ್ಕಾರದ ಆಡಳಿತವನ್ನು ರೈತರ ಮನೆ ಬಾಗಿಲಿಗೆ ತರಬೇಕು. ಉದ್ದೇಶ ಪೂರ್ವಕವಾಗಿ ತಪ್ಪುಗಳನ್ನು ಎಸಗಿ ಕರ್ತವ್ಯ ಲೋಪ ಮಾಡಿ, ರೈತರನ್ನು ಅನಗತ್ಯವಾಗಿ ಎ.ಸಿ.ಕೋರ್ಟಿನ ಮೆಟ್ಟಿಲು ಹತ್ತುವಂತೆ ಮಾಡುವ ಕಂದಾಯ ಇಲಾಖೆಯ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ರೈತರ ಖರ್ಚು ವೆಚ್ಚಗಳನ್ನು ತಪ್ಪಿತಸ್ಥ ನೌಕರರಿಂದಲೇ ವಸೂಲಿ ಮಾಡಿಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಇದ್ದರು.