- ಅಂಕನಹಳ್ಳಿ ಗ್ರಾಮ
- ಸಾಲಬಾಧೆಯಿಂದ ಬೇಸತ್ತು
- ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ
ಮಳವಳ್ಳಿ: ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಸಾಲಬಾಧೆಯಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆಗೆ ಸ್ಪಂದಿಸದೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ಗ್ರಾಮದ ರಾಜಣ್ಣ ಅವರ ಪುತ್ರ ಮಹೇಶ (44) ಮೃತ ರೈತ. ಡಿ.10 ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮತ್ತೊಬ್ಬ ರೈತ ಮೃತ: ಇನ್ನು ಗುರುವಾರ ಇದೇ ಗ್ರಾಮಕ್ಕೆ ಹೊಂದಿಕೊಂಡಂತಿರುವ ಅಂಚೇದೊಡ್ಡಿ ಗ್ರಾಮದ ರೈತ ನಂಜೇಗೌಡ ಸಾಲಬಾಧೆಯಿಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೂವರೆ ಎಕರೆ ಜಮೀನು ಹೊಂದಿದ್ದ ಮಹೇಶ್ ಮರದ ವ್ಯಾಪಾರದ ಜತೆಗೆ ಬೇಸಾಯಕ್ಕಾಗಿ ಕಂದೇಗಾಲ ಗ್ರಾಮದ ಬ್ಯಾಂಕ್ ಆಫ್ ಬರೋಡಾದಲ್ಲಿ 9 ಲಕ್ಷ ರೂ. ಒಡವೆ ಮೇಲೆ ಸಾಲ, ಸ್ವಸಹಾಯ ಸಂಘಗಳಲ್ಲಿ 3 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಮೃತ ಮಹೇಶ್ ಪುತ್ರ ನಾಗೇಂದ್ರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.