ಮಂಡ್ಯದ ಪ್ರವಾಸಿಮಂದಿರದಲ್ಲಿ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕಂಬದ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
- ಜ.21ರಿಂದ 27ರವರೆಗೆ ಸಾತನೂರಿನಲ್ಲಿ ಜಾತ್ರೆ
- ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ
- ಶಾಸಕ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ
ಮಂಡ್ಯ: ತಾಲೂಕಿನ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಜ.21ರಿಂದ 27ರ ವರೆಗೆ ಭಾರೀ ದನಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗ್ರಾಮಸ್ಥರು, ದೇವಸ್ಥಾನದ ಟ್ರಸ್ಟಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಉತ್ಸವದಲ್ಲಿ ಯಾವುದೇ ರಾಜಕೀಯ ಮಾಡದೆ ಶಿಷ್ಟಾಚಾರದಂತೆ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೆ ಹೇಳಿದರು.
ಕೊಮ್ಮೇರಹಳ್ಳಿ ರಸ್ತೆಯಿಂದ ಹಾಗೂ ಉಮ್ಮಡಹಳ್ಳಿ ಗ್ರಾಮದಿಂದ ಬರುವ ಮಾರ್ಗದಲ್ಲಿ ಬಿಜಿಎಸ್ ಶಾಲೆಯಿಂದ ದೇವಸ್ಥಾನದ ವರೆಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಜಾತ್ರಾ ಮಹೋತ್ಸವದ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಸುಮಾರು 25 ಸಾವಿರ ಜನ ಆಗಮಿಸುವಂತೆ ಮಾಡಲಾಗುವುದು. ಇದರಿಂದ ದೇವಸ್ಥಾನ ಅಭಿವೃದ್ಧಿಗೂ ಸಹಾಯವಾಗುತ್ತದೆ. ಭಕ್ತರಿಗೆ ಕುಡಿಯುವ ಶುದ್ಧ ಕುಡಿಯುವ ನೀರನ್ನು ನೀಡಬೇಕು. ತಾತ್ಕಾಲಿಕವಾಗಿ 30 ಶೌಚಗೃಹ ವ್ಯವಸ್ಥೆಯನ್ನು ಮಾಡುವಂತೆ ಸಾತನೂರು ಗ್ರಾಮ ಪಂಚಾಯಿತಿ ಪಿಡಿಒ ಮಲ್ಲೇಶ್‌ಗೆ ಸೂಚಿಸಿದ ಶಾಸಕರು, ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆಯುವಂತೆ ತಾಲೂಕು ಆರೋಗ್ಯಾಧಿಕಾರಿ ಜವರೇಗೌಡ ಅವರಿಗೆ ಆದೇಶಿಸಿದರು. ಅಂತೆಯೇ 21 ರಿಂದ 7 ದಿನಗಳ ಕಾಲ ನಡೆಯಲಿರುವ ದನಗಳ ಜಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜಾನುವಾರುಗಳು ಬರಲಿದ್ದು, ಅವುಗಳಿಗೆ ಮೇವು, ಕುಡಿಯುವ ನೀರಿನಲ್ಲಿ ಯಾವುದೆ ತೊಂದರೆಯಾಗಬಾರದು. ಅಲ್ಲದೆ, ಪಶು ಇಲಾಖೆಯ ಅಧಿಕಾರಿಗಳು ಯಾವುದೇ ರೋಗ-ರುಜಿನ ಬಾರದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಮನವಿ ಸಲ್ಲಿಕೆ: ಕಂಬದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸೇರಿದ ಸುಮಾರು 12 ಎಕರೆ ಜಮೀನಿನಲ್ಲಿ ಮಹಿಳೆಯೊಬ್ಬರು ತೆಂಗು, ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದೇವಸ್ಥಾನದ ಜಾಗವನ್ನು ಬಿಟ್ಟುಕೊಡುವಂತೆ ಆದೇಶವಾಗಿತ್ತು. ಆದರೆ, ಆ ಮಹಿಳೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಸಂಬಂಧವಾಗಿ ವಾದ ಮಾಡಲು ನೇಮಕವಾಗಿರುವ ಸರ್ಕಾರಿ ವಕೀಲರು ಒಂದು ದಿನವೂ ನ್ಯಾಯಾಲಯಕ್ಕೆ ಬಂದಿಲ್ಲ. ಇದರಿಂದಾಗಿ ಭೂಮಿ ವಶಪಡಿಸಿಕೊಳ್ಳಲು ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರಿ ವಕೀಲರಿಗೆ ಹೇಳಬೇಕೆಂದು ದೇವಸ್ಥಾನ ಅಭಿವೃದ್ಧಿ ಸಮಿತಿಯವರು ಶಾಸಕರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ರವಿಕುಮಾರ ಗಣಿಗ, ಇಷ್ಟು ನನ್ನ ಗಮನಕ್ಕೆ ತರದೇ ಏನು ಮಾಡುತ್ತಿದ್ದಿರಿ. ಈ ಬಗ್ಗೆ ಸಂಬಂಧಿಸಿದ ವಕೀಲರ ಜತೆ ಸಭೆ ನಡೆಸಿ ಆದಷ್ಟು ಶೀಘ್ರ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ತಾಪಂ ಇಒ ಲೋಕೇಶ್ ಮೂರ್ತಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಶ್ರೀಕಾಂತ್, ಎಸ್.ಪಿ.ಮಹೇಶ್, ಸತೀಶ್, ನರಸಿಂಹರಾಜು, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ನಿರ್ದೇಶಕ ಸಾತನೂರು ಮಹೇಶ್ ಇತರರಿದ್ದರು.