ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತೆಯೇ ಸೇನೆ ಆಂದೋಲನಕ್ಕೆ ಫೌಜಿಯಾ ತರನ್ನುಮ್ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು. ಕೆ.ಆರ್.ನಂದಿನಿ, ಡಾ.ಶೋಭಾರಾಣಿ, ಬೋರಪ್ಪ, ಅಪ್ಪಾಜಿ ಇತರರು ಇದ್ದರು. 
ಮಂಡ್ಯ

ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಫೌಜಿಯಾ ತರನ್ನುಮ್ ಸಲಹೆ
  • ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ
ಶ್ರೀರಂಗಪಟ್ಟಣ : ಪರಿಸರದ ಸ್ವಚ್ಛತೆ ಸರ್ಕಾರ ಅಥವಾ ಗ್ರಾಮ ಪಂಚಾಯಿತಿಯ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸ್ವಚ್ಛತೆಯನ್ನು ಒಂದು ದಿನದ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ನಿತ್ಯ ಜೀವನದ ಭಾಗವಾಗಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಆಯುಕ್ತೆ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛತೆಯೇ ಸೇನೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಹಸಿ ಕಸವನ್ನು ಮನೆ ಹಂತದಲ್ಲಿಯೇ ಕಾಂಪೋಸ್ಟ್ ಮಾಡುವ ಹಾಗೂ ಒಣ ಕಸವನ್ನು ಗ್ರಾಮ ಪಂಚಾಯಿತಿಯ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನೀಡಬೇಕು. ಪ್ಲಾಸ್ಟಿಕ್, ಗಾಜು, ಲೋಹ ಸೇರಿದಂತೆ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅಗತ್ಯವಿದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು, ಮಲ ತ್ಯಾಜ್ಯ ಸಂಸ್ಕರಣ ಘಟಕದ ವ್ಯವಸ್ಥೆ ಹಾಗೂ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್ ಎಫ್)ಗಳ ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತ್ಯಾಜ್ಯದಿಂದ ಮರುಬಳಕೆಯ ವಸ್ತುಗಳು ಹಾಗೂ ಇತರ ಉಪಯುಕ್ತ ಉತ್ಪನ್ನಗಳನ್ನು ತಯಾರಿಸುವ ಸಾಧ್ಯತೆಗಳಿದ್ದು, ಇವುಗಳ ಪರಿಣಾಮಕಾರಿ ಬಳಕೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸ್ವಚ್ಛತೆ, ತ್ಯಾಜ್ಯ ವಿಂಗಡಣೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ನಿರ್ವಹಿಸುವಂತೆ ಕರೆ ನೀಡಿದರು.
ಮುಟ್ಟಿನ ನೈರ್ಮಲ್ಯ ನಿರ್ವಹಣೆ ಕುರಿತು ಮಹಿಳೆಯರು ಹಾಗೂ ಬಾಲಕಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ, ಗ್ರಾಪಂ ಮಾಜಿ ಅಧ್ಯಕ್ಷ ಬೋರಪ್ಪ, ಮಾಜಿ ಸದಸ್ಯ ಅಪ್ಪಾಜಿ, ಎಸ್‌ಬಿಎಂ ಸಮಾಲೋಚಕರು, ಸ್ವಸಹಾಯ ಸಂಘಗಳ ಮಹಿಳೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.