ಮದ್ದೂರು ಶಾಸಕ ಕೆ.ಎಂ. ಉದಯ್‌ಕುಮಾರ್ ಅವರು ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ವಿನುತಾಉದಯ್, ಕೆ.ಎಂ.ರವಿ ಇತರರಿದ್ದರು.
- ಶಾಸಕ ಕೆ. ಎಂ.ಉದಯ್ ಮನವಿ
- ತಮ್ಮ ಮನೆಯಲ್ಲಿ ಮಾಹಿತಿ ನೀಡುವ ಮೂಲಕ ಚಾಲನೆ
ಮದ್ದೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ತಾಲೂಕಿನ ಜನತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿ ಸಹಕರಿಸಬೇಕೆಂದು ಶಾಸಕ ಕೆ. ಎಂ.ಉದಯ್ ಮನವಿ ಮಾಡಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಬಳಿಕ ಮಾತನಾಡಿದರು.
ಎಸ್‌ಐಆರ್ ಪ್ರಕ್ರಿಯೆಯು ಜೂ.30ರಿಂದ ಆರಂಭವಾಗಿದ್ದು, ಜು.29ರವರೆಗೆ ನಡೆಯಲಿದೆ. ಈ ವೇಳೆ ಪ್ರತಿಯೊಬ್ಬ ಮತದಾರರು ತಮ್ಮ ಮನೆಗೆ ಭೇಟಿ ನೀಡುವ ಬಿಎಲ್‌ಒ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳು ಹಾಗೂ ದಾಖಲೆಗಳನ್ನು ಸಲ್ಲಿಸುವ ಮೂಲಕ ತಪ್ಪದೇ ಭಾಗವಹಿಸಿ, ತಮ್ಮ ಹೆಸರು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇಂದು ನಾನು ಹಾಗೂ ನನ್ನ ಕುಟುಂಬ ಸದಸ್ಯರು ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇವೆ. ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿರುವ ಬಿಎಲ್‌ಒ ಅಧಿಕಾರಿಗಳ ಸೇವೆ ಶ್ಲಾಘನೀಯವೆಂದ ಅವರು, ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ಈ ಮಹತ್ವದ ಕಾರ್ಯದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಸಹಕರಿಸೋಣ ಎಂದರು. ಈ ವೇಳೆ ವಿನುತಾಉದಯ್, ಕೆ.ಎಂ.ರವಿ, ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮೇಗೌಡ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.