ಸುದ್ದಿಗೋಷ್ಠಿಯಲ್ಲಿ ಬಿಇಒ ಧನಂಜಯ ಮಾತನಾಡಿದರು. ಎಚ್.ಆರ್.ಅನಂತೇಗೌಡ, ಚಂದ್ರೇಶೇಖರ್, ದೇವರಾಜು, ರವೀಶ್, ನಾಗೇಶ್, ಶಿವರಾಮಣ್ಣ, ರಮೇಶ್ ಇದ್ದರು.
ಮದ್ದೂರು: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ತಿಳಿಸಿದರು.
ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 39 ಸರ್ಕಾರಿ, 16 ಅನುದಾನಿತ, 29 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳಿಂದ ಒಟ್ಟು 3545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅದರಲ್ಲಿ ಗಂಡು ಮಕ್ಕಳು 1562, ಹೆಣ್ಣು ಮಕ್ಕಳು 1554 ಹಾಗೂ 16 ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿದ್ದಾರೆ ಎಂದರು.
ತಾಲೂಕಿನ 12 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಉಚಿತವಾಗಿ ಸರ್ಕಾರಿ ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ (ಸೆಕ್ಷನ್ 144) ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಪರೀಕ್ಷಾ ಕೇಂದ್ರಗಳ ನಿಯಮಗಳನ್ನು ಪಾಲಿಸಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದರು.
ಪರೀಕ್ಷಾ ಕಾರ್ಯ ನಿರ್ವಹಣೆಗಾಗಿ 12 ಮುಖ್ಯ ಅಧೀಕ್ಷಕರು. 4 ಉಪ ಮುಖ್ಯ ಅಧೀಕ್ಷಕರು. 12 ಪ್ರಶ್ನೆ ಪತ್ರಿಕೆ ಅಭಿರಕ್ಷಕರು. 4 ಮಾರ್ಗಾಧಿಕಾರಿಗಳು. 12 ಸ್ಥಾನಿಕ ಜಾಗೃತ ದಳ ಅಧಿಕಾರಿಗಳು. 12 ಮೊಬೈಲ್ ಪೋನ್ ಸ್ವಾಧೀನಾಧಿಕಾರಿಗಳು. 160 ಕೊಠಡಿ ಮೇಲ್ವಿಚಾರಕರು ಸೇರಿದಂತೆ ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಲು ಸಹಕರಿಸಬೇಕೆಂದು ವಿನಂತಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆಯಲ್ಲೇ ಮದ್ದೂರು ತಾಲೂಕು 5ನೇ ಸ್ಥಾನ ಪಡೆದಿತ್ತು. ಹೀಗಾಗಿ 1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದರು.
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಅನಂತೇಗೌಡ, ಕಾರ್ಯದರ್ಶಿ ಚಂದ್ರಶೇಖರ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ದೇವರಾಜ್, ಜಿಲ್ಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಶ್, ಬಿಆರ್‌ಸಿ ನಾಗೇಶ್, ಮುಖ್ಯ ಶಿಕ್ಷಕ ಶಿವರಾಮಣ್ಣ, ಇಸಿಓ ರಮೇಶ್ ಇದ್ದರು.