ನಾಗಮಂಗಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
- ತಹಸೀಲ್ದಾರ್ ಜಿ.ಆದರ್ಶ ಅಭಿಪ್ರಾಯ
ನಾಗಮಂಗಲ: ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ, ರಾಷ್ಟ್ರದ ಪತಿಯೊಬ್ಬ ಪ್ರಜೆಗೂ ಸಹ ಶಿಕ್ಷಣ ಮೂಲಭೂತ ಹಕ್ಕು ಸೇರಿದಂತೆ ಎಲ್ಲ ರೀತಿಯ ಸಮಾನತೆಯನ್ನು ನಮ್ಮ ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದು ತಹಸೀಲ್ದಾರ್ ಜಿ.ಆದರ್ಶ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಪ್ರಬುದ್ಧವಾದ ದೇಶವಾಗಬೇಕೆಂದರೆ ಡಾ.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಸಹ ಚಾಚು ತಪ್ಪದೆ ಉಳಿಸಿ ಪಾಲಿಸುವ ಜತೆಗೆ ಅನುಸರಣೆ ಮಾಡಬೇಕಿದೆ ಎಂದರು.
ತಾಲೂಕಿನ ಮೈಲಾರಪಟ್ಟಣ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ಎಂ.ಎನ್.ಮಂಜುನಾಥ್ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕನೂ ಸಹ ಸ್ವತಂತ್ರವಾಗಿ ಬದುಕಲು ಸುಭದ್ರವಾದ ಕಾನೂನು ಚೌಕಟ್ಟು ರೂಪಿಸಿ, ಸಮಾನತೆ ಮತ್ತು ಭ್ರಾತೃತ್ವದಡಿಯಲ್ಲಿ ಬದುಕುವ ಹಕ್ಕನ್ನು ನೀಡಿರುವ ಪ್ರತೀಕವೇ ಗಣರಾಜ್ಯ ಎಂದರು.
ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ಹೇಮಂತ್‌ಕುಮಾರ್, ಬಿಇಒ ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಸಹಾಯಕ ಕೃಷಿ ನಿರ್ದೇಶಕ ಹರೀಶ್, ಪಶುಇಲಾಖೆ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಸಿಡಿಪಿಒ ಕೃಷ್ಣಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್, ಕನ್ನಡ ಸಂಘದ ನಟರಾಜ್ ಇರರು ಇದ್ದರು.