ಶ್ರೀರಂಗಪಟ್ಟಣದ ಸುಬ್ರಮಣ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸರ್ವೋದಯ ಮೇಳದಲ್ಲಿ ಅರವಿಂದ ಚೊಕ್ಕಾಡಿ ಮಾತನಾಡಿದರು.
- ಚಿಂತಕ ಅರವಿಂದ ಚೊಕ್ಕಾಡಿ ಬೇಸರ
ಶ್ರೀರಂಗಪಟ್ಟಣ : ಪ್ರಸ್ತುತ ದಿನಗಳಲ್ಲಿ ಸ್ವಾರ್ಥಕ್ಕೆ ಬಿದ್ದ ಜನರಿಂದ ಪರಿಸರ ಲೂಟಿಯಾಗುತ್ತಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಪಟ್ಟಣದ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸರ್ವೋದಯ ಮೇಳದಲ್ಲಿ ಗಾಂಧೀಜಿ ಅವರ ತತ್ವಗಳಲ್ಲಿ ಸರ್ವೋದಯ ಸಾಧ್ಯತೆಗಳ ಕುರಿತು ವಿಷಯ ಮಂಡಿಸಿ ಮಾತನಾಡಿದರು.
ದೇಶ ಸದೃಢವಾಗಿ ನಿಲ್ಲಲು ಗಾಂಧೀಜಿ ಅವರ ಆರ್ಥಿಕ ಚಿಂತನೆ ಕೃಷಿಯನ್ನು ಬಲಗೊಳಿಸಬೇಕು ಎಂಬುದಾಗಿತ್ತು. ಗ್ರಹಿಕೆಯ ಶಕ್ತಿ, ಕೌಶಲ ಹೆಚ್ಚಳವಾಗಬೇಕು. ಸಮಾಜದಲ್ಲಿ ಸಂಪತ್ತಿನ ಅಸಮಾನತೆ ನಿವಾರಣೆಯಾಗಬೇಕು, ರಾಜಕೀಯ ಹಾಗೂ ಹಣಬಲಕ್ಕಿಂತ ನೈತಿಕ ಬಲ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದರು. ಉತ್ಪಾದನಾ ವಿಧಾನವೇ ಬದಲಾಗಬೇಕು. ಕೃಷಿರಂಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಸರ್ವೋದಯದ ಆಶಯವಾಗಿತ್ತು. ಹಿಂದೆ ರಾಜರ ಆಡಳಿತ ಕಾಲದಲ್ಲಿ ಸಾಲು ಮರಗಳನ್ನು ನೆಡಬೇಕು, ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಬೇಕು ಎನ್ನುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಸ್ವಾರ್ಥಕ್ಕೆ ಬಿದ್ದ ಜನರಿಂದ ಪರಿಸರ ಲೂಟಿಯಾಗುತ್ತಿದೆ. ಬೃಹತ್ ರಸ್ತೆಗಳ ನಿರ್ಮಾಣದ ನೆಪದಲ್ಲಿ ಮರಗಳು ಬಲಿಯಾಗುತ್ತಿವೆ ಎಂದರು.
ರಸ್ತೆಗಳು ವಿಸ್ತಾರವಾಗಬೇಕು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಲೂಟಿಯಾಗಬಾರದು. ಇಂದಿನ ಶಾಲಾ-ಕಾಲೇಜುಗಳು ಸ್ಟಾರ್ ಹೋಟೆಲ್‌ಗಳಂತೆ ಬದಲಾಗುತ್ತಿವೆ. ಈ ಬೆಳವಣಿಗೆ ಸರಿಯಲ್ಲ. ಅಲ್ಲಿ ಕಲಿಯುವ ಮಕ್ಕಳಿಗೆ ನಾವು ಯಾವ ನೈತಿಕತೆ ಹೇಳಿಕೊಡಲು ಸಾಧ್ಯ ಎಂದು ಹೇಳಿದರು.
ಹಿರಿಯ ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಮಾತನಾಡಿ, 72 ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ಸರ್ವೋದಯ ಮೇಳ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಗಾಂಧೀಜಿ ಅವರ ಚಿತಾಭಸ್ಮ ವಿಸರ್ಜಿಸಿದ ಮಾಡಿದ ಸ್ಥಳದಲ್ಲಿಯೇ ಸರ್ವೋದಯ ಮೇಳ ಆಚರಣೆ ಮಾಡಲಾಗುತ್ತಿತ್ತು. ಕೆಲವು ವರ್ಷಗಳಿಂದ ಕಾರಣಾಂತರಗಳಿಂದ ಕಲ್ಯಾಣ ಮಂಟಪದಲ್ಲಿ ಆಚರಣೆ ಮಾಡಲಾಗುತ್ತಿದೆ. ಯುವ ಮನಸ್ಸುಗಳಿಗೆ ಗಾಂಧೀಜಿ ಅವರ ವಿಚಾರಧಾರೆಯನ್ನು ತಿಳಿಸಿಕೊಡಲು, ಗಾಂಧಿ ಮತ್ತು ಸರ್ವೋದಯ ಚೌಕಟ್ಟಿನಲ್ಲಿ ಪ್ರಸ್ಥುತ ವಿದ್ಯಮಾನಗಳ ಕುರಿತು ಚರ್ಚಿಸಲು ಈ ಮೇಳ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯರಾದ ಎಸ್.ಲಿಂಗಣ್ಣ, ಗಾಂಧಿವಾದಿಗಳಾದ ಪಾಂಡವಪುರ ಮಂಜುನಾಥ್, ಲಿಂಗಣ್ಣ ಬಂಧೂಕಾರ್, ಕ್ಯಾತನಹಳ್ಳಿಚಂದ್ರಣ್ಣ, ಸಿದ್ದೇಗೌಡ, ಅಪ್ಪಾಜಿ, ಪರಿಸರ ರಮೇಶ್, ಜಯಶಂಕರ್ ಸೇರಿದಂತೆ ಗಾಂಧಿ ಅನುಯಾಯಿಗಳು, ಮೈಸೂರು ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.