ಮಂಡ್ಯ ನಗರದ ಶಿವನಂಜಪ್ಪ ಉದ್ಯಾನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ನೀರೆರೆಯಲಾಯಿತು.
ಮಂಡ್ಯ: ಪ್ರಸ್ತುತ ದಿನದಲ್ಲಿ ಜಾಗತಿಕ ತಾಪಮಾನ ಏರಿಕೆ ಪ್ರಮಾಣ ಹೆಚ್ಚುತ್ತಿದೆ. ಪರಿಣಾಮ ಅಕಾಲಿಕ ಮಳೆ ಅಥವಾ ಬರಗಾಲ ಎದುರಿಸುತ್ತಿದ್ದೇವೆ ಎಂದು ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಆತಂಕ ವ್ಯಕ್ತಪಡಿಸಿದರು.
ನಗರದ ಶಿವನಂಜಪ್ಪ ಉದ್ಯಾನದ ದೇವರಕಾಡು ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಮತ್ತು ಸಸಿ ನೆಡುವುದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಎನ್ನುವುದು ಸರ್ಕಾರ ಅಥವಾ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ. ಬದಲಿಗೆ ಪ್ರತಿ ಮನುಷ್ಯನ ಕರ್ತವ್ಯ. ಪ್ರಾಣಿ-ಪಕ್ಷಿಗಳಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಆದರೆ ಮನುಷ್ಯನ ಅತಿಯಾಸೆಯಿಂದ ಪಕೃತಿಗೆ ಹಾಳಾಗುತ್ತಿದೆ ಎಂದರು.
ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಬದುಕಲು ಆಧಾರವಾಗಿರುವ ಭೂಮಿ ಎಲ್ಲವೂ ಪ್ರಕೃತಿ ನಮಗೆ ಕೊಟ್ಟಿರುವ ಅದ್ಭುತ ಕೊಡುಗೆ. ಆದರೆ ಇಂದು ಮಾನವನ ಅತಿಯಾದ ಆಸೆ ಮತ್ತು ಸ್ವಾರ್ಥದಿಂದಾಗಿ ಪರಿಸರವು ತೀವ್ರವಾಗಿ ಕಲುಷಿತಗೊಳ್ಳುತ್ತಿದೆ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸುತ್ತಿದ್ದೇವೆ, ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದೇವೆ ಎಂದು ಎಚ್ಚರಿಸಿದರು.
ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ಅಣಿಯಾಗೋಣ. ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನೀರಿನ ಉಳಿತಾಯ ಮಾಡೋಣ. ಹನಿ ಹನಿ ನೀರನ್ನು ಕೂಡ ವ್ಯರ್ಥ ಮಾಡದೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹಸಿರು ಜಾಗೃತಿ ಮೂಡಿಸೋಣ, ಮುಂದಿನ ಪೀಳಿಗೆಗೆ ಆಸ್ತಿಪಾಸ್ತಿ ಮಾಡುವುದಕ್ಕಿಂತ ಮುಂಚಿತವಾಗಿ ಶುದ್ಧವಾದ ಪರಿಸರವನ್ನು ಉಳಿಸಿಕೊಡಬೇಕು. ಪ್ರಕೃತಿಯನ್ನು ನಾವು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಇಂದಿನಿಅದಲೇ ನಮ್ಮ ಮನೆಯ ಸುತ್ತಮುತ್ತ ಹಸಿರನ್ನು ಬೆಳೆಸಲು ಮತ್ತು ಪರಿಸರವನ್ನು ಸ್ವಚ್ಛವಾಗಿಡಲು ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಮಹೇಶ್ವರಿ ಸ್ವ-ಸಹಾಯ ಸಂಘದ ಪ್ರತಿನಿಧಿಗಳಾದ ವಿನುತಾ, ರೇಖಾ, ಜಯಲಕ್ಷ್ಮೀ, ಹರಿಣಿ, ವಸಂತಾ, ನಗರಸಭೆ ಅಧಿಕಾರಿ ಪುಟ್ಟಸ್ವಾಮಿ ಇತರರಿದ್ದರು.