ಮಂಡ್ಯ ತಾಲೂಕು ಮಾರದೇವನಹಳ್ಳಿಯಲ್ಲಿರುವ ಸತ್ಯ ಸಾಯಿ ಶಾರದಾನಿಕೇತನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
- ಮಾರದೇವನಹಳ್ಳಿಯಲ್ಲಿರುವ ಶಿಕ್ಷಣ ಸಂಸ್ಥೆ
- ವಿದ್ಯಾರ್ಥಿಗೊಂದು ಮರ ಪರಿಕಲ್ಪನೆಯಡಿ ವಿಶ್ವ ಪರಿಸರ ದಿನದ ಆಚರಣೆ
ಮಂಡ್ಯ: ತಾಲೂಕಿನ ಮಾರದೇವನಹಳ್ಳಿಯಲ್ಲಿರುವ ಸತ್ಯ ಸಾಯಿ ಶಾರದಾನಿಕೇತನದಲ್ಲಿ ‘ವಿದ್ಯಾರ್ಥಿಗೊಂದು ಮರ’ ಪರಿಕಲ್ಪನೆಯಡಿ ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.
ಗುರುಕುಲಕ್ಕೆ ಹೊಸದಾಗಿ ಆರನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರು. ತಾವು ನೆಟ್ಟ ಗಿಡವನ್ನು ಪ್ರತಿದಿನ ವಿದ್ಯಾರ್ಥಿಗಳೇ ನೀರೆರೆದು ಪೋಷಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸುವ ವೇಳೆ ಈ ಗಿಡ ಮರವಾಗಿ ಬೆಳೆದು ನಿಲ್ಲುತ್ತದೆ ಎನ್ನುವ ಸದುದ್ದೇಶವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಏಕ್ ಪೇಡ್ ಮಾ ಕೇ ನಾಮ್ ಉಪಕ್ರಮದಿಂದ ಪ್ರೇರಿತರಾಗಿ ಪರಿಸರ ದಿನಾಚರಣೆಯನ್ನು ಆಯೋಜಿಸಿದ್ದ ಕಾರ್ಯಕ್ರಮವನ್ನು ಸತ್ಯಸಾಯಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಗೌರವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಸಸಿಯಂತೆ. ಅವರಿಗೆ ಸುರಕ್ಷಿತವಾಗಿ ಶಿಸ್ತು ಎಂಬ ಕಟ್ಟೆ ಕಟ್ಟಿ, ಮಾನವೀಯ ಮೌಲ್ಯಗಳು ಎಂಬ ನೀರನ್ನು ಎರೆಯುವಾಗ ಉತ್ತಮ ಚಾರಿತ್ರ್ಯ ಎಂಬ ಹೂವುಗಳು ಅರಳಿ, ಸಮಾಜ ಸೇವೆ ಮತ್ತು ಸಮರ್ಪಿತ ಜೀವನ ಎಂಬ ಹಣ್ಣುಗಳು ದೊರೆಯುತ್ತವೆ ಎಂದರು.
ಪರಿಸರ ಉತ್ತಮವಾಗಿರಲೆನ್ನುವ ಉದ್ದೇಶದಿಂದ ವಿದ್ಯಾರ್ಥಿಗೊಂದು ಮರ ಬೆಳೆಸುವ ಹೊಣೆಗಾರಿಕೆ ನೀಡಲಾಗಿದೆ. ಅದರಂತೆ ಹೊಂಗೆ, ಮಾವು, ಹಲಸು, ತೇಗ ಸೇರಿದಂತೆ ಹತ್ತಾರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರನ್ನು ಎರೆಯಲಾಗಿದೆ. ಈ ಗಿಡಗಳು ಮಕ್ಕಳ ಜತೆ ಬೆಳೆದು ನೆರಳು, ಹಣ್ಣುಗಳನ್ನು ನೀಡುತ್ತಾ ಜನೋಪಯೋಗಿಯಾಗುತ್ತದೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಗುರುಕುಲ ಲೋಕಸೇವಾ ಸಂಸ್ಥೆಯ ಅಧೀನದ ಈ ಶಾಲೆಯಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಗುರುಕುಲದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ರಾಜು, ಚೇತನ್, ಹರ್ಷವರ್ಧನ್, ಶಿಕ್ಷಕರಾದ ಎಂ.ಕಾರ್ತಿಕ್‌ಗೌಡ, ಎಂ.ಸಿ.ಮನು ಇತರರಿದ್ದರು.