ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
- ಮಿಮ್ಸ್‌ನಲ್ಲಿ ಪರಿಸರ ದಿನಾಚರಣೆ
- ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜನೆ
ಮಂಡ್ಯ: ವಿದ್ಯಾರ್ಥಿಗಳು ಗಿಡ, ಮರಗಳನ್ನು ಹೆಚ್ಚು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಬಹುಮುಖ್ಯವಾಗಿ ಪ್ರಕೃತಿಯ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಇಂದಿನ ತುರ್ತು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಮಿಮ್ಸ್, ಅರಣ್ಯ ಇಲಾಖೆ, ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮಂಗಲ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಸರದ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ. ಪರಿಸರವನ್ನು ಸಂರಕ್ಷಣೆ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಎಲ್ಲರಲ್ಲೂ ಪರಿಸರದ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿ. ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದಲ್ಲಿ ಜನಿಸಿ ನೆಲೆಸಿದ್ದ ಒಬ್ಬ ಪರಿಸರವಾದಿಯಾಗಿದ್ದಾರೆ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ನೂರಾರು ಗಿಡ ಮರಗಳನ್ನು ಬೆಳೆಸಿ ಮಕ್ಕಳಂತೆ ಭಾವಿಸಿ ಬೆಳೆಸಿದ್ದಾರೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಪರಿಸರ ಸಂರಕ್ಷಣೆ ಅಥವಾ ಗಿಡಮರ ಬೆಳೆಸುವುದು ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಿಗೆ ಪ್ರತಿ ದಿವಸ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಶಾಶ್ವತವಾಗಿ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಬೇಕು. ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ವಿದ್ಯಾರ್ಥಿಗಳು ಮನೆ ಮತ್ತು ಶಾಲೆಗಳ ಆವರಣದಲ್ಲಿ ಮರ ಗಿಡಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಸಂಪನ್ಮೂಲ ವ್ಯಕ್ತಿ ಲೋಕೇಶ್, ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಯೋಗೇಶ್ ಇತರರಿದ್ದರು.