ಮಂಡ್ಯ ತಾಲೂಕು ಕೆರೆಗೋಡು ಗ್ರಾಮದ ಶ್ರೀ ಮಾಧವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಬಟ್ಟೆ ಬ್ಯಾಗ್‌ಗಳನ್ನು ಬಿಡುಗಡೆ ಮಾಡಲಾಯಿತು.
- ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯ
- ಕೆರಗೋಡು ಗ್ರಾಮದ ಶ್ರೀ ಮಾಧವ ವಿದ್ಯಾಲಯದಲ್ಲಿ ಆಚರಣೆ
ಮಂಡ್ಯ: ಪರಿಸರ ಮಾಲಿನ್ಯದಲ್ಲಿ ಪ್ಲಾಸ್ಟಿಕ್‌ನ ಪಾತ್ರವೇ ಅತ್ಯಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯಿಂದ ಜನರು ದೂರವಿರಬೇಕೆಂದು ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ ಸಲಹೆ ನೀಡಿದರು.
ತಾಲೂಕಿನ ಕೆರಗೋಡು ಗ್ರಾಮದ ಶ್ರೀ ಮಾಧವ ವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯವಾಗಿದೆ. ಪ್ಲಾಸ್ಟಿಕ್ ಬಾಟಲಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಕವರ್‌ಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಮಾಧವ ವಿದ್ಯಾಲಯದ ಖಜಾಂಚಿ ಕೆ.ಎಂ.ರವಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಮ್ಮ ಶಾಲೆಯ ಪ್ರತಿ ಮಗುವಿನ ಜನ್ಮದಿನದಂದು ಒಂದೊಂದು ಗಿಡ ನೀಡಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಆ ಮೂಲಕ ಮಕ್ಕಳಲ್ಲಿ ತಮ್ಮ ಜನ್ಮದಿನದಂತೆ ಗಿಡ ನೆಟ್ಟು ಪೋಷಿಸುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಹಾಗೂ ಪರಿಸರ ಪ್ರೇಮಿ ಜಯಶಂಕರ್ ಅವರು ಬಟ್ಟೆ ಬ್ಯಾಗ್‌ಗಳನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾಲಯದ ಟ್ರಸ್ಟಿ ಎಂ.ಡಿ.ಗಂಗಸ್ವಾಮಿ, ಬಾಲಗೋಕುಲ ಹಾಗೂ ಪರ್ಯಾವರಣ ಸಂಸ್ಥೆಯ ಜಿಲ್ಲಾ ಸಂಯೋಜಕರ ಬಸವರಾಜು ಇತರರಿದ್ದರು.