ಮೇಲುಕೋಟೆಯ ಸರ್ಕಾರಿ ಹಿರಿಯಪ್ರಾಥಮಿಕ ಬಾಲಕರ ಶಾಲಾವಾರ್ಷಿಕೋತ್ಸವದಲ್ಲಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮಕ್ಕಳ ದೇಶಪ್ರೇಮ ಬಿಂಬಿಸುವ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.  
ಮಂಡ್ಯ

ಉತ್ತಮ ಶಿಕ್ಷಣಕ್ಕೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಕರೆ
  • ವಾರ್ಷಿಕೋತ್ಸವ ಸಮಾರಂಭ
ಮೇಲುಕೋಟೆ : ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಮುಂದಾಗಬೇಕು. 150 ವಸಂತ ಪೂರೈಸಿರುವ ಸರ್ಕಾರಿ ಶಾಲೆಯ ಬಲವರ್ಧನೆ ಸಹಕರಿಸಬೇಕು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮನವಿ ಮಾಡಿದರು.
ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಜತೆಗೆ ಬಾಲ್ಯದಿಂದಲೇ ಕಷ್ಟ-ಸುಖಗಳ ಪರಿಚಯ ಮಾಡಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ಜೀವನ ಮೌಲ್ಯವನ್ನು ಕಲಿಸಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಇಂದು ರಾಜ್ಯದ ಆಡಳಿತ ಹಿಡಿದಿದ್ದಾರೆ. ಅಧಿಕಾರದ ವರ್ಗದಲ್ಲಿದ್ದು ಸಮಾಜ ಸೇವೆ ಮಾಡುತ್ತಿದ್ದಾರೆ. ಆದರೂ ಪಾಲಕರು ಖಾಸಗಿ ಶಾಲೆಗಳ ಹಿಂದೆ ಬಿದ್ದ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ ಎಂದರು.
ಮೇಲುಕೋಟೆಯಂತ ಐತಿಹಾಸಿಕವಾದ ಪ್ರಮುಖ ಸ್ಥಳದಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಉಚಿತವಾಗಿ ಶತಮಾನದ ಸರ್ಕಾರಿ ಶಾಲೆ ವಾರ್ಷಿಕೋತ್ಸವ ನಡೆಸುತ್ತಿರುವುದು ಶ್ಲಾಘನೀಯ. ವಿವಿಧ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ಪ್ರವಾಸ, ಉಚಿತ ಎಲ್‌ಕೆಜಿ-ಯುಕೆಜಿ ತರಗತಿಗೆ ದಾಖಲಾತಿ, ಬ್ಯಾಗ್, ಐಡಿ ಕಾರ್ಡ್, ಲೇಖನ ಸಾಮಗ್ರಿಗಳು ಹೀಗೆ ಎಲ್ಲವನ್ನೂ ದಶಕಗಳಿಂದ ಸಂಪೂರ್ಣ ಉಚಿತವಾಗಿ ಕೊಡಿಸಲು ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಸಂತಾನರಾಮನ್ ಪರಿಶ್ರಮ ಶ್ಲಾಘನೀಯ. ಅವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಇದೇ ವೇಳೆ ಸ್ಥಾನಾಚಾರ್ಯ ಸಂಪತ್‌ಕುಮಾರ್ ಮಾತನಾಡಿ, ಮೇಲುಕೋಟೆಯ ಶತಮಾನದ ಶಾಲೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರು, ಅರ್ಚಕರು ವ್ಯಾಸಂಗ ಮಾಡಿದ್ದೇವೆ. ಶತಮಾನದ ಶಾಲೆ ನಮ್ಮೂರಿನ ಹೆಮ್ಮೆಯಾಗಿದ್ದು, ನಾನೂ ಸೇರಿದಂತೆ ಎಲ್ಲರೂ ಶಾಲಾಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಶಾಲಾವಾರ್ಷಿಕೋತ್ಸವದಲ್ಲಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮಕ್ಕಳ ದೇಶಪ್ರೇಮ ಬಿಂಬಿಸುವ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.