ಬೆನಮನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಕೋಡಿ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ವಿ.ಪಿ.ನಾಗೇಶ್, ಪುಟ್ಟರಾಮು ಇತರರು ಇದ್ದರು.
ಹಲಗೂರು: ಗ್ರಾಮೀಣ ಪ್ರದೇಶದಲ್ಲಿ ಹಿಂದೆ ಮದುವೆ, ಶುಭ ಸಮಾರಂಭಗಳಲ್ಲಿ ಹಾಗೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾಡುತ್ತಿದ್ದ ಸೋಬಾನೆ ಪದಗಳು ಹಾಗೂ ಜನಪದ ಕಲೆಗಳನ್ನು ಇಂದಿನ ಯುವ ಪೀಳಿಗೆ ಉಳಿಸಿ, ಪ್ರೋತ್ಸಾಹಿಸಲು ಮುಂದಾಗಬೇಕಾಗಿದೆ ಎಂದು ಒಕ್ಕಲಿಗರ ಸಂಘದ ಮಳವಳ್ಳಿ ತಾಲೂಕು ಅಧ್ಯಕ್ಷ ವಿ.ಪಿ.ನಾಗೇಶ್ ಕರೆ ನೀಡಿದರು.
ಸಮೀಪದ ಬೆನಮನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಕೋಡಿ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಕೆಂಪೇಗೌಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಲಿಂಗಪಟ್ಟಣ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಗಂಗಾಧರ್ ಅವರು ಈ ಟ್ರಸ್ಟಿನ ಮೂಲಕ ಅಳಿವಿನಂಚಿನಲ್ಲಿರುವ ಸೋಬಾನೆ ಪದ ಮುಂತಾದ ಜನಪದ ಕಲೆಗಳನ್ನು ಉತ್ತೇಜಿಸಲು ಅವುಗಳನ್ನು ಗ್ರಾಮೀಣ ಮಟ್ಟದಲ್ಲಿ ಎತ್ತಿಡಿದು ಪ್ರೋತ್ಸಾಹಿಸಿ ಬೆಳೆಸಲು ಪ್ರಾರಂಭ ಮಾಡಿದ್ದಾರೆ. ಇದು ಮುಂದೆ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಲಿ, ಅವರ ಆಶಯ ಸಾಕಾರವಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಪುಟ್ಟರಾಮು ಮಾತನಾಡಿ, ಈ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವುದು ತುಂಬ ಸಂತೋಷಕರವಾಗಿದೆ. ಎಲ್ಲ ಜನರು ತಮ್ಮ ವ್ಯವಹಾರಿಕ ಮತ್ತು ಯಾಂತ್ರಿಕ ಬದುಕಿನ ಜಂಜಾಟದಿಂದ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ. ಅದೇ ರೀತಿ ನಮ್ಮ ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಸಾಧನೆ ಈ ಸಂಸ್ಥೆ ಮಾಡಲಿ ಎಂದರು.
ಮಲ್ಲೇಶ್ ಮತ್ತು ತಂಡದಿಂದ ತಮಟೆ ವಾದನ, ಬನ್ನೂರಿನ ಪ್ರಸಾದ ಮತ್ತು ತಂಡದಿಂದ ಪೂಜಾ ಕುಣಿತ, ಮಂಡ್ಯದ ಮಂಜುನಾಥ್ ಮತ್ತು ತಂಡದಿಂದ ವೀರಗಾಸೆ ಕುಣಿತ, ಶ್ರೀಧರ್ ಮತ್ತು ತಂಡದವರಿಂದ ಪಟದ ಕುಣಿತ, ಹರ್ಷ ಮತ್ತು ತಂಡದಿಂದ ಸಮೂಹ ನೃತ್ಯ, ಚೇತು ಮತ್ತು ತಂಡದಿಂದ ಡೊಳ್ಳು ಕುಣಿತ, ಶಿವು ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ಗಂಗಾಧರ್, ಅಂತಾರಾಷ್ಟ್ರೀಯ ಮಟ್ಟದ ಗಾಯಕರು ಹಾಗೂ ಸಾಹಿತಿಗಳು ಆದ ಬಿ.ಆರ್. ಶಿವಕುಮಾರ್, ಲಿಂಗಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಮರಿಸ್ವಾಮಿ , ರಮೇಶ್, ಕುಮಾರ್, ಎಚ್.ವಿ. ರಾಜು, ದೊರೆಸ್ವಾಮಿ, ಮಂಜು, ಎಂ.ಕೆ.ಮಾದೇವ, ಶಿವಕುಮಾರ್, ಶಿವಪ್ಪ ಇತರರು ಇದ್ದರು.