ಕಿಕ್ಕೇರಿಯ ಕೇಂಬ್ರಿಡ್ಜ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರಿಸರದೊಂದಿಗೆ ನಾವು ನೀವು ಕಾರ್ಯಕ್ರಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಸಸಿ ನೆಟ್ಟು ನೀರೆರೆದರು. ಅನುಪಮಾ, ಎಚ್.ಎಂ. ದೀಪಾ, ಶೇಕ್ಷವಲ್ಲಿ, ಕೋಮಲಾ ಇತರರು ಇದ್ದರು.
- ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಸಲಹೆ
- ಕೇಂಬ್ರಿಡ್ಜ್ ಶಾಲೆಯಲ್ಲಿ ಪರಿಸರದೊಂದಿಗೆ ನಾವು ನೀವು ಕಾರ್ಯಕ್ರಮ
ಕಿಕ್ಕೇರಿ: ಬಿರುಬಿಸಿಲಿನ ತಾಪ ಬೇಸಿಗೆಯ ಶಾಪವಾಗಿದ್ದು ನಿವಾರಣೆ ನಮ್ಮ ಕೈಯಲ್ಲಿಯೇ ಇದೆ ಎಂದು ಎಂದು ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಕೇಂಬ್ರಿಡ್ಜ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರಿಸರದೊಂದಿಗೆ ನಾವು ನೀವು ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರು ಎರೆದು ಮಾತನಾಡಿ, ನನಗೆ ಹುಟ್ಟೂರಿನ ಪ್ರೇಮ ಹೆಚ್ಚು ಕಾಡುತ್ತಿದೆ. ಶಾಲಾ, ಕಾಲೇಜು ಮಕ್ಕಳು ಸಮಾಜದ ಪರಿವರ್ತಕ ಕೇಂದ್ರ ಬಿಂದುಗಳು. ಮಕ್ಕಳ ಮನಸ್ಸು ಪರಿಸರ, ಪ್ರಕೃತಿ, ಸಂಗೀತದ ಕಡೆಗೆ ಆಸಕ್ತಿ ಮೂಡಿದರೆ ಸಾಕು ಎಲ್ಲವೂ ಸರಾಗವಾಗಿ ಆಗಲಿದೆ. ಸಂಸ್ಕಾರ, ಪರಿಸರ ಶಿಕ್ಷಣದ ಬೀಜ ಬಿತ್ತುವ ಕೆಲಸ ಸಮರ್ಪಕವಾಗಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆ ವಾತಾವರಣ ಸುಂದರವಾಗಿದೆ. ಪಕ್ಕದಲ್ಲಿನ ಕೆರೆ, ಸುಂದರವಾದ ತೋಟ ಮಕ್ಕಳ ಓದಿಗೆ ಮದ್ದಿನಂತೆ ಕೆಲಸ ಮಾಡಲಿದೆ. ಮಕ್ಕಳು ಸಸಿ ನೆಡುವ ಜತೆಗೆ ಮಕ್ಕಳ ಹೆಸರಿನಲ್ಲಿ ಸಸಿಗೆ ಇಟ್ಟರೆ ಸಾಕು ಪ್ರೀತಿಯಿಂದ ಸಸಿಯನ್ನು ಉಳಿಸಿ ಬೆಳೆಸಲಿದ್ದಾರೆ ಎಂದು ಹೇಳಿದರು.
ಮರಗಿಡಗಳು ನಮ್ಮೊಂದಿಗೆ ಮಾತನಾಡಲಿವೆ. ಅವುಗಳನ್ನು ಪ್ರೀತಿಯಿಂದ ಪೋಷಿಸಿದರೆ ಸಾಕು. ಶುದ್ಧ ಗಾಳಿ, ಆರೋಗ್ಯ ಎಲ್ಲವನ್ನೂ ನೀಡಲಿದೆ. ಹಲಸು, ಮಾವು, ನೇರಳೆ, ಬೆಟ್ಟದ ನಲ್ಲಿಯಂತಹ ವಿವಿಧ ಬಗೆಯ ಗಿಡಗಳನ್ನು ನೆಡಲು ಎಲ್ಲರೂ ಮುಂದಾಗಬೇಕು. ಪ್ರಕೃತಿ ಸಮತೋಲನದ ಜತೆ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗಲಿದೆ. ಬೇಸಿಗೆಯಲ್ಲಿ ಮೂಕ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ, ಸಮಸ್ಯೆ ಇದೆ. ಇವುಗಳಿಗಾಗಿಯೇ ಒಂದು ಪಾತ್ರೆ, ಕಾಳು ಇಡಲು ಮುಂದಾಗಿ ಎಂದು ವಿನಂತಿಸಿದರು. ಮಕ್ಕಳಿಗೆ ಪರಿಸರ ಗೀತೆ ಹೇಳಿಕೊಟ್ಟು ಪರಿಸರ ಸಂರಕ್ಷಣೆ ಪ್ರತಿಜ್ಞೆ ಮಾಡಿಸಿದರು. ಮುಖ್ಯಶಿಕ್ಷಕಿ ಎಚ್.ಎಂ. ದೀಪಾ, ಮೇಲ್ವಿಚಾರಕಿ ಅನುಪಮಾ, ಶೇಕ್ಷವಲ್ಲಿ, ಕೋಮಲಾ, ಶುಭಾ, ರಕ್ಷಿತಾ ಇತರರು ಇದ್ದರು.