ಹಲಗೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು. ಕುಂತೂರು ಗೋಪಾಲ್, ಎಚ್.ಕೆ.ಕೃಷ್ಣಮೂರ್ತಿ, ದೇವಿರಹಳ್ಳಿ ಕುಮಾರ್, ಬ್ಯಾಡರಹಳ್ಳಿ ರವಿಕುಮಾರ್ ಇತರರು ಇದ್ದರು.
- ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ
- ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಹಲಗೂರು: ಮಳವಳ್ಳಿ ತಾಲೂಕಿನಾದ್ಯಂತ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ವರ್ಗದ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಹಂತ ಹಂತವಾಗಿ ಶ್ರಮಿಸುವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ ನೀಡಿದರು.
ಹಲಗೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮತ್ತು ದೇವಾಲಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಸಮುದಾಯಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಾಮಾನ್ಯ ವರ್ಗದ ಬೀದಿಗಳಿಗೆ ಅಗತ್ಯವಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಹಂತ ಹಂತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ದೇವಿರಹಳ್ಳಿ ಮತ್ತು ಕೆಂಪಯ್ಯನದೊಡ್ಡಿ, ಲಿಂಗಪಟ್ಟಣ ಬಸವೇಶ್ವರ ದೇವಾಲಯ, ಬಾಳೆಹೊನ್ನಿಗ ಗ್ರಾಮದ ಸಿದ್ದಪ್ಪಾಜಿ ದೇವಾಲಯ, ಗುಂಡಾಪುರ ಬೆಟ್ಟದ ಅರಸಮ್ಮ ದೇವಾಲಯ, ಗೊಲ್ಲರಹಳ್ಳಿ ಕಾಳಮ್ಮ, ಗಾಣಾಳು, ನಿಟ್ಟೂರು, ಎನ್.ಹಲಸಹಳ್ಳಿ, ಕುಂತೂರು, ಕರಲಕಟ್ಟೆ ಮಾರಮ್ಮ, ತಾಳವಾಡಿ ಆಂಜನೇಯಸ್ವಾಮಿ, ಮಾರಗೌಡನಹಳ್ಳಿ ಮತ್ತು ತೊರೆಕಾಡನಹಳ್ಳಿ ಮುನೇಶ್ವರ ಸ್ವಾಮಿ ದೇವಾಲಯಗಳನ್ನು ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಬಾಳೆಹೊನ್ನಿಗ, ದಳವಾಯಿ ಕೋಡಿಹಳ್ಳಿ, ಎಚ್.ಬಸಾಪುರ, ಬಸವನಹಳ್ಳಿ, ಹಗಾದೂರು, ಗೊಲ್ಲರಹಳ್ಳಿ, ದೊಡ್ಡ ಎಲಚಗೆರೆ ಬ್ಯಾಡರಹಳ್ಳಿ, ಕರಲಕಟ್ಟೆ, ಮರೀಗೌಡನದೊಡ್ಡಿ, ಹಲಗೂರು, ಕೊನ್ನಾಪುರ, ಲಿಂಗಪಟ್ಟಣ, ಸಾಗ್ಯ ಸರಗೂರು, ಅಂಕನಹಳ್ಳಿ, ನಿಟ್ಟೂರು, ಎನ್.ಹಲಸಹಳ್ಳಿ, ಮಾರಗೌಡನಹಳ್ಳಿ ಗ್ರಾಮಗಳಲ್ಲಿ 4.2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಕುಂತೂರು ಗೋಪಾಲ್, ಎಚ್.ಕೆ.ಕೃಷ್ಣಮೂರ್ತಿ, ದೇವಿರಹಳ್ಳಿ ಕುಮಾರ್, ಬ್ಯಾಡರಹಳ್ಳಿ ರವಿಕುಮಾರ್, ಬಾಳೆಹೊನ್ನಿಗ ಕುಮಾರ್, ರಾಮಲಿಂಗ ನಾಯಕ್, ಚಂದ್ರಕುಮಾರ್, ಮೋಹನ್ ಕುಮಾರ್, ಎಚ್.ವಿ.ರಾಜು, ಪದ್ಮನಾಭ, ಎಚ್.ಆರ್.ದೇವರಾಜು, ಶ್ರೀನಿವಾಸ ಚಾರಿ ಜೀವನ್ ಕುಮಾರ್, ಅನಿಲ್ ಕುಮಾರ್, ಮರಿಸ್ವಾಮಿ, ಮಾದೇಶ ಇತರರು ಇದ್ದರು.