ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಶ್ರೀ ವೀರಭದ್ರಶ್ವರ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು. ಸಂದರ್ಶ, ಹರೀಶ್ ಬಾಬು, ಬಿ.ಬಸವರಾಜು ಇತರರು ಇದ್ದರು.
ಕೆ.ಎಂ.ದೊಡ್ಡಿ : ಕಾಡುಕೊತ್ತನಹಳ್ಳಿ ಗ್ರಾಮ ಮದ್ದೂರು ಕ್ಷೇತ್ರದ ಅತಿ ದೊಡ್ಡ ಗ್ರಾಮವಾಗಿದ್ದು, ಗ್ರಾಮದ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶ್ರೀ ವೀರಭದ್ರಶ್ವರ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಕೆಆರ್‌ಡಿಎಲ್ ವತಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದು, ಗ್ರಾಮದ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಗ್ರಾಮದ ದೇವಾಲಯಗಳಿಗೆ ಅನುದಾನ ನೀಡಿ, ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮದ್ದೂರು ತಾಲೂಕು ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾ.ಪಂ. ಮಾಜಿ ಅಧ್ಯಕ್ಷ ಕಪನಿಗೌಡ, ಕೆಪಿಸಿಸಿ ಸದಸ್ಯ ಎಸ್.ಚಿದಂಬರ ಮೂರ್ತಿ ಮುಖಂಡರಾದ ಕೆ.ಸಿ.ಮಹದೇವು, ಸ್ವಾಮಿ, ಯಡಗನಹಳ್ಳಿ ಕೆಂಚೆಗೌಡ, ಪುಟ್ಟೇಗೌಡ, ಲಕ್ಷಣ, ವೀರಭದ್ರ, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಜು, ಸದಸ್ಯರಾದ ಈ. ರುದ್ರಯ್ಯ, ಮರಿಸ್ವಾಮಿ, ನಿವೃತ್ತ ಎಇಇ ಮಹಾದೇವಸ್ವಾಮಿ ಇತರರು ಇದ್ದರು.
ನನ್ನದೇನು ತಕರಾರು ಇಲ್ಲ: ಮದ್ದೂರು ನಗರಸಭೆ ವ್ಯಾಪ್ತಿಯಿಂದ ತಮ್ಮ ಗ್ರಾಮಗಳನ್ನು ಹೊರಗಿಡುವಂತೆ ಹೋರಾಟ ಮಾಡುತ್ತಿರುವುದು ಅವರ ಹಕ್ಕಾಗಿದ್ದು, ಈ ಬಗ್ಗೆ ನನ್ನದೇನು ತಕರಾರು ಇಲ್ಲ ಎಂದು ಶಾಸಕ ಕದಲೂರು ಉದಯ್ ಸ್ಪಷ್ಟ ಪಡಿಸಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಮದ್ದೂರು ನಗರಸಭೆ ಆಗಿರುವ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯ ಗ್ರಾಮಗಳು ಸಾಕಷ್ಟು ಅಭಿವೃದ್ಧಿ ಹೊಂದುತ್ತವೆ. ಭೂಮಿಯ ಮೌಲ್ಯ ಹೆಚ್ಚಾಗಿ ರೈತ ಮಕ್ಕಳಿಗೆ ಉದ್ಯೋಗ ಲಭಿಸಲಿದೆ. ಅಭಿವೃದ್ಧಿ ಮಾಡುವುದಷ್ಟೇ ನನ್ನ ಕೆಲಸ. ಆ ನಿಟ್ಟಿನಲ್ಲಿ ನಾನು ಕಾಯೋನ್ಮುಖನಾಗಿದ್ದೇನೆ ಎಂದರು.
ಗ್ರಾಮಗಳು ಅಭಿವೃದ್ಧಿಯಾಗುವುದು ಬೇಡ ಎಂದು ಹೋರಾಟ ನಡೆಸಿದರೆ ನಮ್ಮದೇನು ತಕರಾರು ಇಲ್ಲ. ಹೋರಾಟ ನಡೆಸಲು ಎಲ್ಲರಿಗೂ ಹಕ್ಕಿದೆ. ಹೋರಾಟ ನಡೆಸಲಿ ನಾನು ನನ್ನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತಿದ್ದೇನೆ ಎಂದು ತಿಳಿಸಿದರು.
ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರ ಸಭೆ ಮಾಡಿರುವ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಅಭಿವೃದ್ಧಿಪಡಿಸಬೇಕು ಎಂದು ಪಟ್ಟಣ ವ್ಯಾಪ್ತಿಯ ಜನರು ನನ್ನ ಬಳಿ ಮನವಿ ಮಾಡಿದ್ದು, ಮನವಿಗೆ ಪೂರಕವಾಗಿ ಮತ್ತು ತಾಲೂಕಿನ ಅಭಿವೃದ್ಧಿಗಾಗಿ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಮದ್ದೂರು ಪಟ್ಟಣ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇನೆ ಎಂದರು.