ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಎಳ್ಳಮಾವಾಸ್ಯೆ ಅಂಗವಾಗಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. 
ಮಂಡ್ಯ

ಆದಿಚುಂಚನಗಿರಿಯಲ್ಲಿ ಎಳ್ಳಮವಾಸ್ಯೆ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಸಹಪಂಕ್ತಿಯಲ್ಲಿ ಪ್ರಸಾದ ಸೇವಿಸಿದ ಚುಂಚಶ್ರೀ
ನಾಗಮಂಗಲ : ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಎಳ್ಳಮವಾಸ್ಯೆ ವಿಶೇಷ ಪೂಜೆ ಶುಕ್ರವಾರ ನಡೆಯಿತು.
ಕಾಲಭೈರವೇಶ್ವರಸ್ವಾಮಿ, ಮಾಳವ್ವದೇವಿ, ಗಂಗಾಧರೇಶ್ವರಸ್ವಾಮಿ, ಸ್ಥಂಭಾಭಿಕೆದೇವಿ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯನ್ನು ವಿಶೇಷವಾಗಿ ಪುಷ್ಪಾಲಂಕಾರದೊಂದಿಗೆ ಅಲಂಕರಿಸಲಾಗಿತ್ತು. ಮಠದ ಆವರಣದಲ್ಲಿ ಹೋಮ ಹವನ ಜರುಗಿದವು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಕಾಲಭೈರವೇಶ್ವರಸ್ವಾಮಿ ದೇವಾಲಯದ ಒಳಾಂಗಣದಲ್ಲಿ ಅಲಂಕೃತಗೊಂಡ ಕಾಲಭೈರವೇಶ್ವರಸ್ವಾಮಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆಗಳನ್ನು ರಥದಲ್ಲಿರಿಸಿ ಪ್ರದಕ್ಷಿಣೆ ಮಾಡಲಾಯಿತು. ಈ ಸಂದರ್ಭ ನೂರಾರು ಸಂಖ್ಯೆಯ ಭಕ್ತರು ರಥವನ್ನು ಎಳೆದು ಪುನೀತರಾದರು.
ಮಾಜಿ ಶಾಸಕ ಮಾಗಡಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠದ ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು. ಅಮಾವಾಸ್ಯೆ ಪೂಜೆಯ ನಂತರ ಮಠದ ಆವರಣದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಠದ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸೂರ್ಯ ನಮಸ್ಕಾರ ಸಲ್ಲಿಸಿದರು. ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿತರಿಸಿ ನಂತರ ಸಹಪಂಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದರು.
ಈ ಸಂದರ್ಭ ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ, ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಶ್ರೀ ಸಂವಿಧಾನನಾಥ ಸ್ವಾಮೀಜಿ ಇದ್ದರು.