ಪಾಂಡವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬಿಎಲ್ಎ-2 ಗಳ ಸಭೆಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿದರು. ದಿನೇಶ್ ಗೂಳಿಗೌಡ, ಎಚ್.ತ್ಯಾಗರಾಜು, ಹೊನ್ನಗಾನಹಳ್ಳಿ ಕಿಟ್ಟಿ, ಸಿ.ಆರ್.ರಮೇಶ್, ಉದಯ್ ಇದ್ದರು. 
ಮಂಡ್ಯ

ಅರ್ಹ ಮತದಾರರು ಮತದಾನದಿಂದ ವಂಚಿತರಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೇಳಿಕೆ
ಪಾಂಡವಪುರ: ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಕಾಂಗ್ರೆಸ್ ಮತ್ತು ಪಕ್ಷದ ಬಿಎಲ್ಎಗಳು ಎಚ್ಚರಿಕೆ ವಹಿಸಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ, ಹಾಗೂ ಎಸ್‌ಐಆರ್ ಜಿಲ್ಲಾ ಉಸ್ತುವಾರಿ ಜಿ.ಎನ್.ನಂಜುಂಡಸ್ವಾಮಿ ಹೇಳಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಎಲ್ಎ-2 ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಎಸ್‌ಐಆರ್ ಮೂಲಕ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ನಾಯಕರ ಕುತಂತ್ರದಿಂದ ಕಾಂಗೆಸ್ ಕೆಲವೆಡೆ ಅಧಿಕಾರ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 5.5 ಕೋಟಿಗೂ ಅಧಿಕ ಮತದಾರರಿದ್ದು, ಈ ಪೈಕಿ ಒಂದು ಕೋಟಿ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ. ಅದರಂತೆ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ವಹಿಸಿ ಮತದಾರರಿಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನ ಮತ ಬ್ಯಾಂಕ್ ಆಗಿರುವ ಅಹಿಂದ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಮತಪಟ್ಟಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ತೆಗೆದುಹಾಕಲು ಬಿಜೆಪಿ ನಾಯಕರು ಹುನ್ನಾರ ನಡೆಸುತ್ತಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗಟ್ಟಾಗಿ 2028 ರ ಚುನಾವಣೆ ಎದುರಿಸಲಿದ್ದಾರೆ. ಮುಂದಿನ ಬಾರಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮೂರು ಹೋಳಾಗಿದ್ದು, ವಿಜಯೇಂದ್ರ, ಯತ್ನಾಳ್ ಹಾಗೂ ವಿ.ಸೋಮಣ್ಣ ಅವರದ್ದೇ ಆದ ಪ್ರತೇಕ ಗುಂಪುಗಳಿವೆ. ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ಹೋರಾಟ ನಡೆಯುತ್ತಿದೆ. ಅವರು ಕೆಳಗಿಳಿದರೆ ಯಡಿಯೂರಪ್ಪ ಸುಮ್ಮನೆ ಕೂರುವುದಿಲ್ಲ. ಜತೆಗೆ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ನಾಲ್ಕು ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಒಳಪಟ್ಟಿದೆ. ಅಂತೆಯೇ ಶಕ್ತಿ ಯೋಜನೆಯಡಿ 22 ಕೋಟಿಗೂ ಅಧಿಕ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕೆ ಸರ್ಕಾರ 680 ಕೋಟಿ ರೂ. ಕೊಟ್ಟಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಗಾನಹಳ್ಳಿ ಕಿಟ್ಟಿ, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ವೀಕ್ಷಕ ಉದಯ್ ಇತರರು ಇದ್ದರು.