ಮಳವಳ್ಳಿ ಉಪವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನ, ಬೆಳ್ಳಿ ಸಾಮಗ್ರಿಗಳು. 
ಮಂಡ್ಯ

ಪ್ರತ್ಯೇಕ ಪ್ರಕರಣ, ಹನ್ನೊಂದು ಜನರ ಬಂಧನ: ಮೂವತ್ನಾಲ್ಕು ಲಕ್ಷ ರೂ ಮೌಲ್ಯದ ವಸ್ತು ವಶ

ಪ್ರಮುಖ ಮುಖ್ಯಾಂಶಗಳು

  • ಮಳವಳ್ಳಿ ಉಪವಿಭಾಗದ ಪೊಲೀಸರ ಕಾರ್ಯಾಚರಣೆ
  • ಕಳ್ಳರ ಹೆಡೆಮುರಿ ಕಟ್ಟಿದ ಖಾಕಿ
  • ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು
ಮಂಡ್ಯ: ಮೂರು ಪ್ರತ್ಯೇಕ ಪ್ರಕರಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನ ಆರೋಪಿಗಳು ಬಂಧಿಸಿ ಅಂದಾಜು ಮೂವತ್ನಾಲ್ಕು ಲಕ್ಷ ರೂ ಮೌಲ್ಯದ ವಸ್ತು ವಶಪಡಿಸಿಕೊಳ್ಳುವಲ್ಲಿ ಮಳವಳ್ಳಿ ಉಪವಿಭಾಗದ ಪೊಲೀಸರ ತಂಡ ಯಶಸ್ವಿಯಾಗಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಜ.9ರಂದು ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದರಂತೆ ತನಿಖೆ ಪ್ರಾರಂಭಿಸಿದ ಪೊಲೀಸರ ತಂಡ, ಜ.18ರಂದು ಸಂಜೆ ಮಳವಳ್ಳಿ ಪಟ್ಟಣದಲ್ಲಿಯೇ ಮೈಸೂರು ತಾಲೂಕು ಕಾಮನಕೆರೆ ಹುಂಡಿ ಗ್ರಾಮದ ಕಾರ್ತಿಕ್(23), ಮಳವಳ್ಳಿ ತಾಲೂಕು ಬಾಣಸಮುದ್ರ ಗ್ರಾಮದ ಸಾಗರ್(23) ಮತ್ತು ಮಳವಳ್ಳಿ ಪಟ್ಟಣದ ಪ್ರಜ್ವಲ್(23) ಎಂಬುವರನ್ನು ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ವಿವಿಧ ಕಂಪನಿಗೆ ಸೇರಿದ ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10, ಕೊಳ್ಳೇಗಾಲ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯಲ್ಲಿ ತಲಾ ಎರಡು ಪ್ರಕರಣ, ಕಿರುಗಾವಲಿನಲ್ಲಿ ಒಂದು, ಮಂಡ್ಯ ಪೂರ್ವ ಠಾಣೆಯಲ್ಲಿ ಎರಡು, ಮೈಸೂರು ಸಿಟಿ, ಮಳವಳ್ಳಿ ಟೌನ್ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿದಂತೆ 19 ಬೈಕ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ಏಳು ಲಕ್ಷ ರೂಗಳು ಎಂದು ಮಾಹಿತಿ ನೀಡಿದರು.
ಈ ಮೂವರು ಹಿಂದೆ ಬಾರ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಿಚಯವಾದವರು. ನಂತರ ಶೋಕಿ ಜೀವನಕ್ಕಾಗಿ ಬೈಕ್ ಕಳ್ಳತನಕ್ಕಿಳಿದಿದ್ದರು. ಕಳವು ಮಾಡಿದ ಬೈಕ್‌ಗಳನ್ನು ಅಡವಿಟ್ಟು ಹಣ ಪಡೆದುಕೊಳ್ಳುತ್ತಿದ್ದರು. ಈ ರೀತಿ ಅಡವಿಟ್ಟುಕೊಂಡಿದ್ದವರಿಂದ ಪೊಲೀಸರು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ ಜಿಲ್ಲಾ ಎಸ್ಪಿ, ಪ್ರಕರಣ ಪತ್ತೆ ಮಾಡಿದ ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಮಳವಳ್ಳಿ ಟೌನ್ ಠಾಣೆ ಎಸ್‌ಐ ಶಿವಲಿಂಗ ದಳವಾಯಿ, ಎಎಸ್‌ಐ ಸುರೇಶ್, ಗೋಪಾಲ್, ಸಿಬ್ಬಂದಿ ಮಾದೇಶ್, ಮಹದೇವಸ್ವಾಮಿ, ಹರ್ಷವರ್ಧನ್, ಪ್ರಭುಸ್ವಾಮಿ, ರಿಯಾಜ್‌ಪಾಷಾ, ವಿಕಾಸ್, ಶ್ರೀನಿವಾಸ್ ಮಧುಕಿರಣ್ ತಂಡವನ್ನು ಅಭಿನಂದಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಶಿವಲಿಂಗ ದಳವಾಯಿ ಇತರರಿದ್ದರು.

ಚಿಂದಿ ಹಾಯುವ, ಪಾತ್ರೆ ರಿಪೇರಿ ನೆಪದಲ್ಲಿ ಕಳ್ಳತನ
ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಚಿಂದಿ ಹಾಯುವ ಹಾಗೂ ಪಾತ್ರೆ ರಿಪೇರಿ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಆರು ಜನ ಕಳ್ಳರ ತಂಡಕ್ಕೆ ಖಾಕಿ ಎಡೆಮುರಿ ಕಟ್ಟಿದೆ. ಜ.16ರಂದು ಮಳವಳ್ಳಿ ತಾಲೂಕು ಸಾಗ್ಯ ಸರಗೂರು ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಸರ, ರೇಷ್ಮೆ ಸೀರೆ, ಹುಂಡಿ ಹಣ ದೋಚಲಾಗಿತ್ತು. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ತಮಿಳುನಾಡು ಮೂಲದ ವಿಜಯ್(46) ಮತ್ತು ಮಣಿ(35), ಕನಕಪುರ ತಾಲೂಕು ಸಾತನೂರು ಕಾಲನಿಯ ಮಧುರ(22), ಮಾಯಪ್ಪನಹಳ್ಳಿಯ ಭರತ್(21), ರಾಮನಗರ ಟೌನ್‌ನ ನವೀನ್(21), ಮೈಸೂರು ನಗರದ ಶಬ್ಬಿರ್(28) ಎಂಬುವರನ್ನು ಜ.17ರಂದು ಕನಕಪುರ ತಾಲೂಕು ಸಾತನೂರು ಟೌನ್‌ನ ದೇವಸ್ಥಾನದ ಬಳಿ ಬಂಧಿಸಲಾಗಿದೆ ಎಂದು ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಆರೋಪಿಗಳೆಲ್ಲರೂ ಬೇರೆ ಬೇರೆ ಕಡೆಯವರಾಗಿದ್ದರೂ ಚಿಂದಿ ಹಾಯುವ ಕೆಲಸ ಮಾಡುತ್ತಿದ್ದಾಗ ಜತೆಯಾಗಿದ್ದಾರೆ. ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಇವರು ಬೆಳಕವಾಡಿ, ಕೆ.ಎಂ.ದೊಡ್ಡಿ, ಮಳವಳ್ಳಿ ಟೌನ್, ಸಾತನೂರು, ಕನಕಪುರ ಹಾಗೂ ತಮಿಳುನಾಡು, ಅಂಚೆಹಟ್ಟಿ, ಧರ್ಮಪುರಿ, ಕೃಷ್ಣಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರಿಂದ 7,17,844 ರೂ ಮೌಲ್ಯದ 24 ಗ್ರಾಂ ತೂಕದ ಚಿನ್ನಾಭರಣ, 245 ಗ್ರಾಂ ತೂಕದ ಬೆಳ್ಳಿಯ ಒಡವೆ, ಎರಡು ಜತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, ಐದು ಘಂಟೆ, ಹುಂಡಿಯಲ್ಲಿ ದೋಚಿದ್ದ 5,094 ರೂಗಳು, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಬೈಕ್, ಗೂಡ್ಸ್ ಆಟೋ, ಎರಡು ಕಬ್ಬಿಣ್ಣದ ರಾಡ್ ಜತೆಗೆ ಕಳ್ಳತನ ಮಾಡಿದ್ದ ಎರಡು ಮೇಕೆಯನ್ನು ಮಾರಾಟ ಮಾಡಿದ್ದ 12 ಸಾವಿರ ರೂ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ ಎಸ್ಪಿ, ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಲೋಕೇಶ್, ಸಿಬ್ಬಂದಿ ರಿಯಾಜ್‌ಪಾಷಾ, ಪ್ರಭುಸ್ವಾಮಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಮೋಹನ್‌ಕುಮಾರ್, ರಫಿಕ್ ನಧಾಪ್ ಅವರನ್ನು ಅಭಿನಂದಿಸಿದರು.

20 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿ ವಶ

ಗಂಗಾಧರ್ ಎಂಬುವರು ಕಳೆದ ಡಿ.17ರಂದು ಮಳವಳ್ಳಿ ಪಟ್ಟಣದಲ್ಲಿ ನಡೆದಿದ್ದ ಶಿವರಾತ್ರಿಶ್ವರ ಶಿವಯೋಗಿಗಳ ಜಯಂತಿ ಕಾರ್ಯಕ್ರಮ ನೋಡಲು ಕುಟುಂಬ ಸಮೇತ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬೆಂಗಳೂರು ನಗರದ ಬಾಬಾಜಾನ್(37) ಹಾಗೂ ಈತನ 16 ವರ್ಷದ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದು 1440 ಗ್ರಾಂ ತೂಕದ ಚಿನ್ನ ಹಾಗೂ 46 ಗ್ರಾಂ ತೂಕದ ಕಾಲಿನ ಚೈನ್ ವಶಪಡಿಸಲಾಗಿದೆ. ಇವುಗಳ ಮೌಲ್ಯ 20 ಲಕ್ಷ ರೂಗಳಾಗಿದೆ ಎಂದು ಮಾಹಿತಿ ನೀಡಿದ ಜಿಲ್ಲಾ ಎಸ್ಪಿ, ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಲೋಕೇಶ್, ಎಎಸ್‌ಐಗಳಾದ ಎಂ.ಬಿ.ಸುರೇಶ್, ರಮೇಶ್, ಸಿಬ್ಬಂದಿ ಮಾದೇಶ್, ಹರ್ಷವರ್ಧನ್, ವಿಕಾಸ್, ಸಿದ್ದರಾಜು, ರಫೀಕ್ ನದಾಪ್, ಮಂಜು ಅವರನ್ನು ಶ್ಲಾಘಿಸಿದರು.